ಕಾರವಾರ: ಕೋವಿಡ್ ನಂತರದ ದಿನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳು ವೇಗವಾಗಿ ಚುರುಕುಪಡೆಯುತ್ತಿದೆ. ಆದರೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಬಂದ ಪ್ರವಾಸಿಗರು ನಿರ್ಲಕ್ಷ್ಯವಾಗಿ ವರ್ತಿಸುತ್ತಿದ್ದು ಜಲಕ್ರೀಡೆಯಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಪಾಲ್ಗೊಂಡು ಮೋಜುಮಸ್ತಿಯಲ್ಲಿ ತೊಡಗಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮುರ್ಡೆಶ್ವರ, ಗೋಕರ್ಣ, ಕಾರವಾರ ಕಡಲತೀರಗಳಲ್ಲಿ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ ಬಂದ ಪ್ರವಾಸಿಗರು ಸಮುದ್ರದಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ನೀರಿಗೆ ಇಳಿಯುತ್ತಿದ್ದಾರೆ. ಸಮುದ್ರದಲ್ಲಿ ಈಜಲು ಬಾರದಿರುವ ಪ್ರವಾಸಿಗರು ಕೂಡಾ ನೀರಿಗೆ ಇಳಿದು ಜೀವಕ್ಕೆ ಹಾನಿಮಾಡಿಕೊಂಡ ಎಷ್ಟೋ ದುರ್ಘಟನೆಗಳು ಕೂಡಾ ನಡೆದು ಹೋಗಿವೆ. ಈ ಘಟನೆಯ ನಡುವೆ ದಾಂಡೇಲಿಯ ಕಾಳಿ ನದಿಯಲ್ಲಿ ಪ್ರವಾಸಿಗರು ಲೈಫ್ ಜಾಕೆಟ್ ಹಾಕಿ ಕೊಳ್ಳದೆ, ರ‍್ಯಾಫ್ಟಿಂಗ್ ನಲ್ಲಿ ಪಾಲ್ಗೊಂಡು ನಿರ್ಲಕ್ಷತನ ಮೆರೆಯುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಇಲ್ಲಿನ ಲೈಫ್ ಗಾರ್ಡರ್ ಮತ್ತು ಕಾವಲುಗಾರರು ಪ್ರವಾಸಿಗರಿಗೆ ನೀರಿನ ಏರಿಳಿತದ ಬಗ್ಗೆ ಮುನ್ಸೂಚನೆ ನೀಡಿದರೂ ಕೂಡಾ ನಿರ್ಲಕ್ಷ್ಯವಾಗಿ ಮೋಜುಮಸ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕೂಡಾ ಪ್ರವಾಸಿಗರ ವಿರುದ್ದ ಗರಂ ಆಗಿದ್ದು ಮುಂದಿನ ದಿನದಲ್ಲಿ ಇಂತ ಘಟನೆಗಳು ಮರುಕಳಿಸಿದ್ರೆ ಇಂತ ಪ್ರವಾಸಿಗರ ವಿರುದ್ದ ದೂರು ದಾಖಲಿಸುವುದಾಗಿ ಹೇಳಿದೆ.
