ಚಿಕ್ಕೋಡಿ: ತಳ್ಳೋ ಗಾಡಿಯಲ್ಲಿ ಪತಿಯ ಶವವನ್ನು ಪತ್ನಿ ಸಾಗಿಸಿದ ಅಮಾನವೀಯ ಘಟನೆ ಬೆಳಗಾವಿಯ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ಸದಾಶಿವ ಹಿರಟ್ಟಿ (55) ಅನಾರೋಗ್ಯದಿಂದ ಗುರುವಾರ ರಾತ್ರಿ ಸಾವನ್ನಪ್ಪಿದ್ದರು. ಅನಾರೋಗ್ಯದಿಂದ ಬಳಲಿ ತೀರಿಹೋದ ಪತಿಯ ಅಂತ್ಯ ಸಂಸ್ಕಾರಕ್ಕೆ ಕೊರೊನಾ ಭಯದಿಂದ ಯಾರು ಬರದ ಕಾರಣ ಪತ್ನಿಯೇ ತಳ್ಳೋ ಗಾಡಿಯಲ್ಲಿ ಪರಿಚಯಸ್ಥರೊಬ್ಬರ ಸಹಾಯದಿಂದ ಶವ ಸಾಗಿಸಿದ್ದಾರೆ.

ಅಥಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂದೆ ಚಪ್ಪಲಿ ಹೊಲಿದುಕೊಂಡಿದ್ದ ಸದಾಶಿವ ನಿನ್ನೆ ತಡರಾತ್ರಿ ಮನೆಗೆ ಹೋಗಿ ಮಲಗಿದಲ್ಲೇ ಮೃತಪಟ್ಟಿದ್ದರು. ಬೆಳಿಗ್ಗೆ ಪತ್ನಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೊರೊನಾ ಬಂದು ಸಾವನ್ನಪ್ಪಿರಬಹುದು ಎಂದು ಸಂಬಂಧಿಕರು ಹಾಗೂ ಸ್ಥಳೀಯರು ಯಾರು ಸಹಾಯಕ್ಕೆ ಬರಲೇ ಇಲ್ಲ. ಯಾರು ಬಾರದೆ ಇದ್ದಾಗ ಪತ್ನಿ ಬಟ್ಟೆಯಲ್ಲಿ ಸುತ್ತಿ ಶವ ಸಾಗಿಸಿದ್ದಾರೆ.

ಅಂತ್ಯ ಸಂಸ್ಕಾರಕ್ಕೂ ಸಹ ಹೆಗಲಿಲ್ಲದೆ ತಳ್ಳುವ ಗಾಡಿಯಲ್ಲಿ ಹಾಕಿ ಶವ ಸಾಗಾಣೆ ಮಾಡಿ ಅಂತ್ಯ ಸಂಸ್ಕಾರ ಮಾಡಲಾಗಿದೆ. 13 ವರ್ಷದ ಪುತ್ರನ ಜೊತೆ ನಿಂತು ಪತಿಯ ಅಂತ್ಯ ಸಂಸ್ಕಾರವನ್ನ ಪತ್ನಿ ಮಾಡಿರುವ ದೃಶ್ಯಗಳು ಕಂಡು ಕೊರೊನಾ ರೋಗದಿಂದ ಸಂಬಂಧಗಳಿಗೇ ಬೆಲೆಯೇ ಇಲ್ಲ ಎನ್ನುವಂತಾಗಿದೆ. ಅಥಣಿ ಪುರಸಭೆ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಬೇಸತ್ತು ತಾನೇ ಹೋಗಿ ಪತಿಯ ಅಂತ್ಯಸಂಸ್ಕಾರವನ್ನು ಪತ್ನಿ ಮಾಡಿದ್ದು ಮನಕಲಕುವ ಘಟನೆಗೆ ಸಾಕ್ಷಿಯಾಗಿದೆ
Laxmi News 24×7