ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ, ಉತ್ತರದ ಸಿದ್ಧಗಂಗೆ ಎಂದೇ ಖ್ಯಾತವಾಗಿರುವ ಕೊಪ್ಪಳ ಗವಿಮಠದ ಅಜ್ಜನ ಜಾತ್ರಾ ಮಹೊತ್ಸವದ ತೇರೆಳೆಯೋದು ಬಹುತೇಕ ಪಕ್ಕಾ ಆಗಿದೆ. ಅಧಿಕೃತವಾಗಿ ಈವರೆಗೆ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲವಾದರೂ ಶುಕ್ರವಾರ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಸಂಸದ ಕರಡಿ ಸಂಗಣ್ಣ, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಮತ್ತು ರಾಘವೇಂದ್ರ ಹಿಟ್ನಾಳರವರು ಜಾತ್ರಾ ಮಹೋತ್ಸವ ಸಂಬಂಧ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.
ಗವಿಮಠದ ಜಾತ್ರೆ, ಭಕ್ತರ ಜಾತ್ರೆ. ಭಕ್ತರ ತೀರ್ಮಾನವೇ ನಮ್ಮ ತೀರ್ಮಾನ ಎಂದು ಶ್ರೀಗಳು ಹೇಳಿದ್ಧಾರೆ ಎನ್ನಲಾಗಿದೆ. ಪ್ರತಿಸಲದಂತೆ ಆದ್ದೂರಿಯಾಗಿ ಮಾಡದಿದ್ದರೂ ಸಂಕ್ಷಿಪ್ತವಾಗಿ ರಥೋತ್ಸವ ಕಾರ್ಯಕ್ರಮ ಹಾಗೂ ಮೂರು ದಿನ ದಾಸೋಹ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ. ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಚಿಂತನಾಗೋಷ್ಠಿಗಳನ್ನು ಹಾಗೂ ಹಾಸ್ಯ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಜಾತ್ರೆಯಲ್ಲಿ ಯಾವುದೇ ರೀತಿಯ ಅಂಗಡಿಗಳು ಮತ್ತು ವಸ್ತು ಪ್ರದರ್ಶನಗಳಿಗೆ ಅವಕಾಶ ನೀಡುವುದಿಲ್ಲ. ಮಳೇಮಲ್ಲೇಶ್ವರದಿಂದ ನಡೆಯುತ್ತಿದ್ದ ಜಾಥಾ ಸಹ ರದ್ದಾಗಿದೆ. ಭಕ್ತಾದಿಗಳು ಎಲ್ಲ ಮುನ್ನೆಚ್ಚರಿಕೆಗಳೊಂದಿಗೆ ಮಾಸ್ಕ್ ಧರಿಸಿ ಬರುವಂತಹ ವ್ಯವಸ್ಥೆ ಮಾಡಿ ಜಾತ್ರೆಯನ್ನು ನಡೆಸೋಣ ಎನ್ನುವ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.
Laxmi News 24×7