ಬೆಂಗಳೂರು: ನಗರದಲ್ಲಿ ದಿನಸಿ ಸಾಮಾನು ಖರೀದಿಗೆ 12 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಸಮಯವನ್ನು ಯಾರು ಯಾರು ಬಳಕೆ ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ. ಆದರೆ 12 ಗಂಟೆ ಬಳಿಕ ಅವಕಾಶವಿಲ್ಲ. ನಿಮ್ಮ ವ್ಯವಹಾರಗಳನ್ನು ನಿಗದಿತ ಸಮಯದ ಒಳಗೆ ಮುಗಿಸಿಕೊಳ್ಳಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ನಿಗದಿತ ಅವಧಿ ಒಳಗೆ ಅಗತ್ಯ ವಸ್ತುಗಳನ್ನು ಖರೀದಿಸಿ ನಿಮ್ಮ ಕಾರ್ಯ ಪೂರ್ಣಗೊಳಿಸಿ. ಪೊಲೀಸ್ ಫೋರ್ಸ್ ಬಳಸುವ ಅನಿವಾರ್ಯತೆ ತಂದುಕೊಡಬೇಡಿ. ನೀವು ಅನಿವಾರ್ಯತೆ ತಂದರೆ ಬಳಕೆ ಮಾಡಬೇಕಾಗುತ್ತದೆ. ಪೊಲೀಸ್ ಇಲಾಖೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಪಾಲನೆ ಮಾಡಲು ಕಟ್ಟುನಿಟ್ಟಾದ ಕ್ರಮ ತೆಗೆದುಕೊಂಡಿದ್ದಾರೆ ಎಂದರು.
ನಗರದ ಹಲವಾರು ಕಡೆ ಬ್ಯಾರಿಕೇಡ್ ಹಾಕಿ, ಫ್ಲೈ ಓವರ್ ಬಂದ್ ಮಾಡಿದ್ದೇವೆ. ವಾಹನ ದಟ್ಟಣೆ ಕಡಿಮೆ ಇದೆ, ಲಾಕ್ ಡೌನ್ ವಾತಾವರಣ ನಿರ್ಮಾಣವಾಗಿದೆ. ಅಗತ್ಯ ಸೇವೆಗಳಿಗೆ ಅವಕಾಶ ಕೊಡುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. ಪೊಲೀಸರು ಸಹಕಾರ ಕೊಟ್ಟು ಕೆಲಸ ಮಾಡ್ತಾರೆ, ಜನರೂ ಕೂಡಾ ಸಹಕಾರ ನೀಡಬೇಕು. ಲಾಕ್ ಡೌನ್ ಯಶಸ್ವಿ ಆಗಬೇಕಾದರೆ ಜನರ ಸ್ವಯಂ ಪ್ರೇರಿತ ಲಾಕ್ ಡೌನ್ ಆಗಬೇಕು. ಆಗ ಮಾತ್ರ ಹೆಚ್ಚುತ್ತಿರುವ ಸೋಂಕಿನ ಚೈನ್‍ಗೆ ಬ್ರೇಕ್ ಮಾಡಲು ಸಾಧ್ಯವಾಗುತ್ತದೆ. ಅನಗತ್ಯವಾಗಿ ಓಡಾಟ ನಡೆಸಿದರೆ ತಡೆಗಟ್ಟಿ ಎಂದು ಪೊಲೀಸರಿಗೆ ಸೂಚಿಸಿದ್ದೇವೆ ಎಂದರು.
ಗೃಹ ಇಲಾಖೆಯ ಮುಖ್ಯಸ್ಥರ ಸಭೆ ನಡೆಸಿದ್ದು, ಬೆಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಲಾಕ್‍ಡೌನ್ ಕುರಿತು ಚರ್ಚೆ ಮಾಡಿದ್ದೇವೆ. ಮಾರ್ಗಸೂಚಿ ಬದಲಾಗಿರುವ ಹಿನ್ನೆಲೆಯಲ್ಲಿ ನಮ್ಮ ಪೊಲೀಸರ ಕಾರ್ಯ ವೈಖರಿಯೂ ಬದಲಾಗುತ್ತದೆ. ಬೆಂಗಳೂರು ನಗರಕ್ಕೆ 2000 ಹೋಂ ಗಾರ್ಡ್ ಅಗತ್ಯವಿದ್ದು, ಸದ್ಯದಲ್ಲೇ ನೇಮಕ ಮಾಡುತ್ತೇವೆ. ಸಿವಿಲ್ ಡಿಫೆನ್ಸ್ ನೆರವು ಸಹ ಪಡೆಯುತ್ತೇವೆ. ಬೆಂಗಳೂರಿನ ಎಲ್ಲಾ ವಾರ್ಡ್‍ಗಳಿಗೆ 200 ಆಂಬ್ಯುಲೆನ್ಸ್ ಅಗತ್ಯ ಇದೆ. ಸದ್ಯ 100 ಸಿದ್ಧವಿದೆ ಎಂದು ತಿಳಿಸಿದರು.
ಕೊರೊನಾ ಸೋಂಕಿಗೆ ಪೊಲೀಸರು ತುತ್ತಾಗಿದ್ದು, ಪೊಲೀಸರ ಮನೋಸ್ಥೈರ್ಯ ಹೆಚ್ಚಿಸಲು ಎಲ್ಲ ಕೆಲಸ ಮಾಡುತ್ತೇವೆ. ಕೃಷಿ, ಕೈಗಾರಿಕಾ ಉತ್ಪನ್ನಗಳಿಗೆ ಸರಬರಾಜು ಮಾಡಲು ಸಮಸ್ಯೆ ಆಗಲ್ಲ. ಇಂದು ಮೊದಲ ದಿನ ಆದ್ದರಿಂದ ಸ್ವಲ್ಪ ಫ್ರೀ ಬಿಡಲಾಗಿದೆ, ನಾಳೆಯಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.