ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ
ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ತಿಮ್ಮವ್ವಗೋಳ ಮತ್ತು ಸಹ ಶಿಕ್ಷಕ ಕದಮ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕದ ಕಾರ್ಯಕರ್ತರು ಬುಧವಾರದಂದು ಚಿಕ್ಕೋಡಿ ಉಪ ನಿರ್ದೇಶಕರ ಶಾಲಾ ಶಿಕ್ಷಣ ಇಲಾಖೆಯ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸಿ, ಉಪ ನಿರ್ದೇಶಕ ಸೀತಾರಾಮ ಅವರಿಗೆ ಮನವಿ ಅರ್ಪಿಸಿದರು.

ಕಳೆದ ಹಲವು ವರ್ಷಗಳಿಂದ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ ತಿಮ್ಮವ್ವಗೋಳ ಮತ್ತು ಸಹ ಶಿಕ್ಷಕ ನಾಮದೇವ ಕದಮ್ ಅವರು ಶಾಲೆಯ ಪರಿಸರವನ್ನು ಸಂಪೂರ್ಣ ಹಾಳುಗೆಡವಿದ್ದಾರೆ. ಶಾಲಾ ಕೊಠಡಿಗಳಲ್ಲಿ ಅಳವಡಿಸಲಾಗಿರುವ ಪ್ಯಾನ್ ಗಳು ಸಂಪೂರ್ಣ ಹಾಳಾಗಿದ್ದು, ಸ್ವಿಚ್ ಬೋರ್ಡಗಳು ತೀರಾ ಹದಗೆಟ್ಟವೆ. ಇದರಿಂದ ವಿದ್ಯಾರ್ಥಿಗಳ ಶಾಲಾ ಕೊಠಡಿಯಲ್ಲಿ ವಿದ್ಯಾಭ್ಯಾಸ ಮಾಡಲು ತೊಂದರೆಯಾಗುತ್ತಿದೆ. ಶಾಲೆಯ ಕೊಠಡಿಗಳಲ್ಲಿ ಎಲ್ಲಿ ಬೇಕಲ್ಲಿ ಕಸ ಶೇಖರಿಸಿ ಇಡಲಾಗಿದೆ. ಬಹುಮುಖ್ಯವಾಗಿ ಬಿಸಿಯೂಟದಲ್ಲಿ ಭೋರಿ ಗೋಲಮಾಲ್ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಕೋಡುವ ಬಾಳೆಹಣ್ಣು, ತರಕಾರಿ ಮತ್ತು ಬೆಳೆ ಕಾಳುಗಳು ಸಮರ್ಪಕವಾಗಿ ಬಳಕೆ ಮಾಡಲಾಗುತ್ತಿಲ್ಲ. ಪಕ್ಕದ ಘಟಪ್ರಭಾ ಗ್ರಾಮದಲ್ಲಿ ತಾಜಾ ತರಕಾರಿ ಮಾರುಕಟ್ಟೆ ಇದ್ದರೂ ಸಹ ಮುಖ್ಯೋಪಾಧ್ಯಾಯ ತಿಮ್ಮವ್ವಗೋಳ ಆಗಲಿ ಅಡುಗೆ ಜವಾಬ್ದಾರಿ ಪಡೆದಿರುವ ಸಹ ಶಿಕ್ಷಕ ನಾಮದೇವ ಕದಮ ಅಲ್ಲಿಗೆ ಹೋಗಿ ತರಕಾರಿ ತರದೆ ಮಕ್ಕಳಿಗೆ ಕೊಳೆತ ತರಕಾರಿಗಳನ್ನು ತಂದು ಬಳಿಸುತ್ತಿದ್ದಾರೆ. ಇದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆದ ನಿದರ್ಶನಗಳು ಹಲವಾರಿವೆ. ಅದೇ ತೆರನಾಗಿ ಅಡುಗೆ ಕೋಣೆಯಲ್ಲಿಯೂ ಸಹ ಕಸ ಕಡ್ಡಿಗಳು ಬಿದ್ದು ಸಂಪೂರ್ಣ ಗಲಿಜಾಗಿರುತ್ತದೆ.

ಮುಖ್ಯೋಪಾಧ್ಯಾಯ ಅಶೋಕ್ ತಿಮ್ಮವ್ವಗೋಳ ಬಂದಾಗಿನಿಂದ ಶಾಲೆಯ ಫಲಿತಾಂಶ ಸಂಪೂರ್ಣ ಹದಗೆಟ್ಟಿದೆ. 2021 ರಲ್ಲಿ 100ಕ್ಕೆ 100 ರಷ್ಟಿದ್ದ ಫಲಿತಾಂಶ 22 ರಲ್ಲಿ 95%, 23ರಲ್ಲಿ 92% ,24 ರಲ್ಲಿ 61% ಮತ್ತು 25 ರಲ್ಲಿ 53% ಈ ರೀತಿ ಕುಸಿಯುತ್ತಾ ಬಂದಿದೆ.ಹಾಗಾಗಿ ಕಳೆದ 7 ವರ್ಷದಿಂದ ಪಾಮಲದಿನ್ನಿ ಸರಕಾರಿ ಪ್ರೌಢಶಾಲೆ ಸಂಪೂರ್ಣ ಹದಗೆಟ್ಟು ಹೋಗಿದೆ. 8ನೇ ತರಗತಿಯ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಂದ ತಲಾ 300 ರೂಪಾಯಿ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡಲು ತಲಾ 100 ರೂಪಾಯಿ ಹಣವನ್ನು ರಾಜಾರೋಷವಾಗಿ ಪಡೆಯುತ್ತಾನೆ.
ಜಿಪಂ ಬೆಳಗಾವಿ ಸನ್ 2021-22ನೇ ತಾಪಂ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಪಾಮಲದಿನ್ನಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ 4.90 ಲಕ್ಷ ರೂ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದು, ಅದನ್ನು ಸಹ ಸರ್ಮಪಕವಾಗಿ ಬಳಕೆ ಮಾಡಿಕೊಳ್ಳದೆ ಸಂಪೂರ್ಣ ಹಾಳು ಗೆಡವಿದ್ದಾರೆ. ಹಾಗಾಗಿ ಇದಕ್ಕೆ ಕಾರಣಿಕೃತರಾದ ಶಾಲೆಯ ಮುಖ್ಯೋಪಾಧ್ಯಾಯ ಅಶೋಕ್ ತಿಮ್ಮವ್ವಗೋಳ ಮತ್ತು ಸಹ ಶಿಕ್ಷಕ ನಾಮದೇವ ಕದಮ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರಿಗೆ ತಕ್ಷಣದಿಂದ ಸೇವೆಯಿಂದ ಅಮಾನತು ಮಾಡಬೇಕು ಎಂದು ಕರವೇ ವತಿಯಿಂದ ಮನವಿಯಲ್ಲಿ ವಿನಂತಿಸಲಾಗಿದೆ . ಇದಕ್ಕೆ ತಪ್ಪಿದಲ್ಲಿ ಮಾನ್ಯ ಅಪರ ಆಯಕ್ತರು ಶಾಲಾ ಶಿಕ್ಷಣ ಇಲಾಖೆ ಧಾರವಾಡ ಇವರ ಕಛೇರಿಯ ಎದುರು ಸತ್ಯಾಗ್ರಹ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
Laxmi News 24×7