ಬೆಂಗಳೂರು: ರಾಜ್ಯ ಸರ್ಕಾರ ಇದೀಗ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಕಾರ್ಪೊರೇಟ್ ಸಂಸ್ಥೆಗಳ ಸಹಭಾಗಿತ್ವಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ಸಂಬಂಧ ರಾಜ್ಯದ ಸರ್ಕಾರಿ ಶಾಲೆಗಳ ಸುಧಾರಣೆಗಾಗಿ ಸಿಎಸ್ಆರ್ ಹೂಡಿಕೆ ಉತ್ತೇಜಿಸಲು ಸಿಸಿಎಸ್ಆರ್ ನೀತಿ ರೂಪಿಸಿದೆ.
ಕರ್ನಾಟಕದಲಿನ ಸರ್ಕಾರಿ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾಮಾಜಿಕ ಹೊಣೆಗಾರಿಕೆ ನಿಧಿಯ ಮೊರೆ ಹೋಗಿದೆ. ಕಾರ್ಪೊರೇಟ್ ಸಂಸ್ಥೆಗಳ ಸಿಎಸ್ಆರ್ ನಿಧಿಯನ್ನು ಬಹುವಾಗಿ ಸರ್ಕಾರಿ ಶಾಲೆಗಳ ಮೇಲೆ ಹೂಡಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿನ ವಿವಿಧ ಕಾರ್ಪೋರೇಟ್ ಕಂಪನಿಗಳಿಂದ ವಾರ್ಷಿಕವಾಗಿ 8,500 ಕೋಟಿ ಸಿಎಸ್‌ಆರ್ ನಿಧಿಯಡಿ ಲಭ್ಯವಿದೆ. ಈ ನಿಧಿಯನ್ನು ಹೆಚ್ಚಾಗಿ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಪ್ರಸ್ತುತ ರಾಜ್ಯದ ಶಿಕ್ಷಣ ವಲಯದಲ್ಲಿ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಸಿಎಸ್ಆರ್) ಕೊಡುಗೆಗಳು ನೇರವಾಗಿ ಆಯಾ ಶಾಲೆ ಮತ್ತು ಕಾಲೇಜುಗಳಿಗೆ ದೇಣಿಗೆ ನೀಡುತ್ತಿದ್ದು, ಇದು ಸಾಮಾನ್ಯವಾಗಿ ಸ್ಥಳ, ಅನುಕೂಲ ಅಥವಾ ವ್ಯಕ್ತಿನಿಷ್ಠಗಳನ್ನು ಆಧರಿಸಿರುತ್ತದೆ. ಪ್ರಸ್ತುತ ಕೈಗಾರಿಕಾ ಘಟಕಗಳು ಅಥವಾ ಖಾಸಗಿ ಸಂಸ್ಥೆಗಳು ತಮ್ಮ ಪ್ರಧಾನ ಕಚೇರಿಗಳ ಸಮೀಪದ ಸ್ಥಳೀಯತೆ ಆಧರಿಸಿ ಸಿ.ಸಿ.ಎಸ್.ಆರ್. ನಿಧಿಯನ್ನು ಸ್ವತಂತ್ರ ತರಗತಿ ಕೊಠಡಿಗಳು, ಶೌಚಾಲಯಗಳು, ಪೀಠೋಪಕರಣಗಳು, ಪ್ರಯೋಗಾಲಯ ಉಪಕರಣಗಳು, ಕಂಪ್ಯೂಟರ್‌ಗಳು, ಸ್ಮಾರ್ಟ್ ಬೋರ್ಡ್‌ಗಳು ಮತ್ತು ಅಂತರ್ಜಾಲ ಸಂಪರ್ಕ ವೃದ್ಧಿ ಮುಂತಾದುವುಗಳ ಮೂಲಸೌಕರ್ಯಕ್ಕಾಗಿ ಒಂದು ಬಾರಿಗೆ ದೇಣಿಗೆಗಳ ರೂಪದಲ್ಲಿ ನೀಡುತ್ತಿವೆ. ಸಿಎಸ್ಆರ್ ನಿಧಿಯನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಇದೀಗ ಹೊಸ ಸಿಎಸ್ಆರ್ ನೀತಿ ರೂಪಿಸಲು ಮುಂದಾಗಿದೆ.
ರಾಜ್ಯದಲ್ಲಿನ ಸರ್ಕಾರಿ ಶಾಲೆಗಳೆಷ್ಟು?: ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ, ಅನೇಕ ಕಂಪನಿಗಳು, ಟ್ರಸ್ಟ್‌ಗಳು, ದಾನಿಗಳು, ಪ್ರತಿಷ್ಠಾನಗಳು, ಎನ್ಜಿಒಗಳು ಸಿಸಿಎಸ್ಆರ್ ಅನುದಾನಗಳನ್ನು ವಿನಿಯೋಗ ಮಾಡುತ್ತಿವೆ. ಕರ್ನಾಟಕ ಸುಮಾರು 47,193 ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಹೊಂದಿದ್ದು, ಅವುಗಳಲ್ಲಿ 19,603 ಪ್ರಾಥಮಿಕ ಶಾಲೆಗಳು, 21,676 ಹಿರಿಯ ಪ್ರಾಥಮಿಕ ಶಾಲೆಗಳು, 4,895 ಪ್ರೌಢಶಾಲೆಗಳು ಮತ್ತು 1,319 ಪದವಿ ಪೂರ್ವ ಕಾಲೇಜುಗಳಾಗಿವೆ. ಪ್ರಸ್ತುತ 309 ಸರ್ಕಾರಿ ಶಾಲೆಗಳು ಮಾತ್ರ LKG ಯಿಂದ 12ನೇ ತರಗತಿಯವರೆಗೆ ಸಂಯೋಜಿತ ಶಿಕ್ಷಣವನ್ನು ಹೊಂದಿರುತ್ತವೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸರ್ಕಾರಿ ಶಾಲೆಗಳಲ್ಲಿ 2015-16 ರಲ್ಲಿ 47.1 ಲಕ್ಷ ವಿದ್ಯಾರ್ಥಿಗಳ ದಾಖಲಾತಿಯಿಂದ 2025 – 26ರಲ್ಲಿ 38.2 ಲಕ್ಷಕ್ಕೆ ಗಣನೀಯವಾಗಿ ಕುಸಿದಿದೆ. ಒಟ್ಟು ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳ ಪಾಲು ಶೇ 46 ರಿಂದ ಶೇ.38 ಕ್ಕೆ ಇಳಿದಿದೆ (19% ಕುಸಿತ).
ಆದರೆ, ಅನುದಾನರಹಿತ ಖಾಸಗಿ ಶಾಲೆಗಳ ಪಾಲು 2015-16ರಲ್ಲಿ 36.3 ಲಕ್ಷ ವಿದ್ಯಾರ್ಥಿಗಳಿಂದ 2025-26ರಲ್ಲಿ 47.0 ಲಕ್ಷಕ್ಕೆ ಹೆಚ್ಚಾಗಿರುತ್ತದೆ (29% ಏರಿಕೆ). 2014-15 ರಲ್ಲಿ, 50ಕ್ಕಿಂತ ಕಡಿಮೆ ಅಥವಾ ಸಮಾನ ವಿದ್ಯಾರ್ಥಿಗಳನ್ನು ಹೊಂದಿರುವ 21,973 ಸರ್ಕಾರಿ ಶಾಲೆಗಳು ಇದ್ದವು. ಅದು ಈಗ 2025-26ರಲ್ಲಿ 25,683ಕ್ಕೆ ಏರಿದೆ. 2025-26ರಲ್ಲಿ ಸರ್ಕಾರಿ ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕ್ರಮವಾಗಿ 46,137 ಮತ್ತು 38.20 ಲಕ್ಷ ಮತ್ತು ಸರ್ಕಾರಿ ಪಿಯು ಕಾಲೇಜುಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕ್ರಮವಾಗಿ 1.319 ಲಕ್ಷ ಮತ್ತು 2.77 ಲಕ್ಷ. 2025-26 ರಲ್ಲಿ ಖಾಸಗಿ ಅನುದಾನಿತ ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕ್ರಮವಾಗಿ 6.13 ಲಕ್ಷ ಮತ್ತು 11.16 ಲಕ್ಷ ಮತ್ತು 2025-26ರಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕ್ರಮವಾಗಿ 16.52 ಲಕ್ಷ ಮತ್ತು 48.02 ಲಕ್ಷಗಳಾಗಿರುತ್ತದೆ.
Laxmi News 24×7