Breaking News

‘ಸುವರ್ಣ ವಿಧಾನಸೌಧದ ಮುಂದೆ ಬಸವಣ್ಣನ ಮೂರ್ತಿ ಸ್ಥಾಪಿಸಿ, ಅಧಿವೇಶನದಲ್ಲಿ ಘೋಷಿಸಿ’

Spread the love

ಬೆಳಗಾವಿ: ಅನುಭವ ಮಂಟಪದ ಮೂಲಕ ಜಗತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುನ್ನುಡಿ‌ ಬರೆದವರು ವಿಶ್ವಗುರು ಬಸವಣ್ಣ. ಭಾರತದ ಸಂವಿಧಾನದಲ್ಲಿರುವ ಬಹುತೇಕ ಅಂಶಗಳು ಬಸವಾದಿ ಶರಣರ ವಿಚಾರಗಳೇ ಆಗಿವೆ. ಅಂತಹ ಬಸವಣ್ಣನವರ ಪುತ್ಥಳಿಯನ್ನು ಉತ್ತರ ಕರ್ನಾಟಕದ ಶಕ್ತಿ ಸೌಧ ಸುವರ್ಣ ವಿಧಾನಸೌಧದ ಮುಂದೆ ಪ್ರತಿಷ್ಠಾಪಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಸುವರ್ಣ ವಿಧಾನಸೌಧದ ಮುಂಭಾಗ ಈಗಾಗಲೇ ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ‌ ರಾಯಣ್ಣ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಗಳನ್ನು ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಇದೇ ವರ್ಷದ ಜನವರಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮದ ವೇಳೆ ಬೃಹದಾಕಾರದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಸಿದ್ದರಾಮಯ್ಯನವರ ಸರ್ಕಾರ ಅನಾವರಣಗೊಳಿಸಿದೆ. ಇದು ಎಲ್ಲರಿಗೂ ಖುಷಿ ತಂದಿದೆ. ಈ ಮಹನೀಯರ ಜೊತೆಗೆ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಯನ್ನೂ ಸ್ಥಾಪಿಸುವಂತೆ ಬಸವಾನುಯಾಯಿಗಳು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಅಧಿವೇಶನದ ಸಂದರ್ಭದಲ್ಲಿ ಸುವರ್ಣಸೌಧದ ಸೆಂಟ್ರಲ್ ಹಾಲ್ ಮುಂಭಾಗದಲ್ಲಿ ಅನುಭವ ಮಂಟಪದ ತೈಲವರ್ಣದ ಚಿತ್ರವನ್ನು ಅನಾವರಣಗೊಳಿಸಲಾಗಿತ್ತು. ಸೌಧದ ಹೊರಗೆ ಮಹಾತ್ಮ ಗಾಂಧಿ ಪುತ್ಥಳಿ ಗಾತ್ರದ ಬಸವಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು, ಆಗ ಸೌಧಕ್ಕೆ ಮತ್ತಷ್ಟು ಗೌರವ ಬರುತ್ತದೆ ಎಂಬುದು ಬಸವಪರ ಸಂಘಟನೆಗಳ ಅಭಿಪ್ರಾಯ.

ರಾಷ್ಟ್ರೀಯ ಬಸವದಳ ಜಿಲ್ಲಾಧ್ಯಕ್ಷ ಅಶೋಕ ಬೆಂಡಿಗೇರಿ ಅವರು ಮಾತನಾಡಿ, ”ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕರೆಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘೋಷಣೆ ಮಾಡಿರುವುದು ನಮಗೆಲ್ಲ ಅತೀವ ಸಂತಸ ತಂದಿದೆ. ಕರ್ನಾಟಕ ಪುಣ್ಯಭೂಮಿ. ಇಲ್ಲಿನ ಬಸವಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಚಾಲನೆ ನೀಡಿದ್ದರು. ಜಾತಿ, ವರ್ಗ, ವರ್ಣರಹಿತ, ಸಮ ಸಮಾಜ ನಿರ್ಮಾಣದ ನಿರ್ಮಾತೃ. ಸಮಾನತೆ, ಕಾಯಕ, ದಾಸೋಹ ತತ್ವದ ಮೂಲಕ ಕಲ್ಯಾಣ ರಾಜ್ಯ ನಿರ್ಮಿಸಿದ್ದರು. ಹಾಗಾಗಿ, ಸುವರ್ಣ ಸೌಧಕ್ಕೆ ಬರುವ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳಿಗೆ ಪ್ರೇರಣೆ ಆಗುವ ನಿಟ್ಟಿನಲ್ಲಿ ಸೌಧದ ಮುಂಭಾಗದಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪಿಸಲು ಈ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಬಸವಾನುಯಾಯಿ ಉದಯ ಕರ್ಜಗಿಮಠ ಅವರು ಮಾತನಾಡಿ, ”ಜಗತ್ತಿನಲ್ಲಿ ಮೊಟ್ಟ ಮೊದಲ ಸಂಸತ್ತು ನಿರ್ಮಾಣ ಆಗಿದ್ದು, ಈಗಿನ ಉತ್ತರ ಕರ್ನಾಟಕದ ಬಸವಕಲ್ಯಾಣದಲ್ಲಿ. ಪ್ರಜಾಪ್ರಭುತ್ವ ಹುಟ್ಟು ಹಾಕಿದ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು ಸುವರ್ಣ ಸೌಧದ ಮುಂದೆ ಪ್ರತಿಷ್ಠಾಪಿಸಬೇಕು. ಆ ಬಗ್ಗೆ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ನಿರ್ಧರಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕುವುದು, ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರಕ್ಕೆ ವರದಿ ಶಿಫಾರಸು, ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಅವರ ಹೆಸರು ಇಡುವುದು ಸೇರಿದಂತೆ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ‌ ನಾಯಕ ಎಂದು ಘೋಷಿಸಿದ್ದಾರೆ. ಹೀಗೆ ಸಾಕಷ್ಟು ಬಸವಪರ ಕೆಲಸಗಳನ್ನು ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಇದೊಂದು ಬೇಡಿಕೆ ಈಡೇರಿಸಲಿ” ಎಂದು ಕೋರಿದರು‌.


Spread the love

About Laxminews 24x7

Check Also

ನಾವು ಡಿಸಿಎಂ ಮಾಡದಿದ್ದರೆ ಕಾಂಗ್ರೆಸ್ ಸಿದ್ದರಾಮಯ್ಯರನ್ನು ಮೂಸಿ ನೋಡುತ್ತಿರಲಿಲ್ಲ: ಹೆಚ್.​ಡಿ.ಕುಮಾರಸ್ವಾಮಿ

Spread the loveಬೆಂಗಳೂರು: ನಾವು ಡಿಸಿಎಂ ಮಾಡದೇ ಇದಿದ್ದರೆ ಕಾಂಗ್ರೆಸ್ ಅವರನ್ನು ಮೂಸಿ ನೋಡುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ