Breaking News

ಇಂದು ಮತ್ತೊಂದು ಸಾವು, 31ಕ್ಕೆ ಏರಿದ ಸಾವಿನ ಸಂಖ್ಯೆ

Spread the love

ಬೆಳಗಾವಿ: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ಸಾವಿನ ಸರಣಿ ಮುಂದುವರಿದಿದೆ. ಇಂದು(ಸೋಮವಾರ) ಬೆಳಗಿನ ಜಾವ ಮತ್ತೊಂದು ಮೃತಪಟ್ಟಿದ್ದು, ಈ ಮೂಲಕ ಕೃಷ್ಣಮೃಗಗಳ ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿರುವ ಕಿರು ಮೃಗಾಲಯದಲ್ಲಿ ಕಳೆದ ಐದು ದಿನಗಳ ಅಂತರದಲ್ಲಿ ಒಟ್ಟು 31 ಕೃಷ್ಣ ಮೃಗಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

ನ.13ರಂದು 8, ನ.15ರಂದು 20, ನಿನ್ನೆ 16ರಂದು ಬೆಳಗ್ಗೆ 1 ಮತ್ತು ಸಂಜೆ ಮತ್ತೊಂದು ಕೃಷ್ಣಮೃಗ ಸಾವನ್ನಪ್ಪಿತ್ತು. ಇಂದು ಬೆಳಗ್ಗೆ ಇನ್ನೊಂದು ಸಾವನ್ನಪ್ಪಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಉಳಿದಿರುವ ಏಳು ಕೃಷ್ಣಮೃಗಗಳನ್ನು ಉಳಿಸಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಬನ್ನೇರುಘಟ್ಟ ಮೃಗಾಲಯದಿಂದ ಆಗಮಿಸಿರುವ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರಿದಿದೆ. ಕೃಷ್ಣ ಮೃಗಗಳ ಸರಣಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮೃಗಾಲಯಕ್ಕೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಭೇಟಿ ನೀಡಿದ್ದು, ಇಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.

ಗಳಲೆ ರೋಗದಿಂದ ಕೃಷ್ಣಮೃಗಗಳು ಸಾವನ್ನಪ್ಪಿರುವ ಶಂಕೆಯನ್ನು ತಜ್ಞ ವೈದ್ಯರ ತಂಡ ವ್ಯಕ್ತಪಡಿಸಿದೆ. ಅಲ್ಲದೇ ಹೆಮೊರೈಸಿಕ್ ಸೆಪ್ಪಿಸಿಮಿಯಾ (HS- ರಕ್ತಸ್ರಾವ) ಎಂಬ ರೋಗದಿಂದ ಕೃಷ್ಣಮೃಗಗಳು ಸಾವನ್ನಪ್ಪಿರುವ ಅಂದಾಜಿದೆ. ಇದು ಅತ್ಯಂತ ಗಂಭೀರ ಪರಿಣಾಮ ಬೀರುವ ಬ್ಯಾಕ್ಟಿರಿಯಾ. ರೋಗ ತಗುಲಿದ 24 ಗಂಟೆಗಳಲ್ಲೇ ಪ್ರಾಣಿಗಳು ಉಸಿರು ಚೆಲ್ಲುತ್ತವೆ. ಸದ್ಯ ಕೃಷ್ಣಮೃಗಗಳ ಸಾವಿನ ರೀತಿ ಇದಕ್ಕೆ ಹೋಲಿಕೆ ಆಗುತ್ತಿದೆ. ಈಗಾಗಲೇ ಕೃಷ್ಣ ಮೃಗಗಳ ಲಿವರ್, ಕಿಡ್ನಿ ಸೇರಿ ವಿವಿಧ ಅಂಗಾಂಗಗಳ ಮಾದರಿಯನ್ನು ತಜ್ಞ ವೈದ್ಯರ ತಂಡ ಸಂಗ್ರಹಿಸಿ ಬೆಂಗಳೂರಿನ ಪಶು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಒಯ್ದಿದ್ದು, ಅಲ್ಲಿಂದ ವರದಿ ಬಂದ ಬಳಿಕ ಯಾವ ಕಾರಣದಿಂದ ಕೃಷ್ಣಮೃಗಗಳು ಸಾವನ್ನಪ್ಪಿವೆ ಎಂಬುದು ಖಚಿತವಾಗಲಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ‌ ಬೆಳಗಾವಿಯ ಕುವೆಂಪು ನಗರದ ನಿವಾಸದಲ್ಲಿ ಮಹತ್ವದ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ರಂಗಸ್ವಾಮಿ, ಡಿಎಫ್‌ಒ ಕ್ರಾಂತಿ, ಎಸಿಎಫ್ ನಾಗರಾಜ ಬಾಳೇಹೊಸೂರು ಸೇರಿ ಮತ್ತಿತರ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಕೃಷ್ಣ ಮೃಗಗಳು ಸಾವನ್ನಪ್ಪಿವೆ..? ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಸತೀಶ್​ ಜಾರಕಿಹೊಳಿ ಮಾಹಿತಿ ಪಡೆದಿದ್ದಾರೆ.


Spread the love

About Laxminews 24x7

Check Also

BBK12 ಮುಕ್ತಾಯ ಬೆನ್ನಲ್ಲೇ ಕಿಚ್ಚ ಸುದೀಪ್, ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ವಂಚನೆ ಆರೋಪ: ಕಮಿಷನರ್‌ಗೆ ದೂರು.

Spread the love BBK12 ಮುಕ್ತಾಯ ಬೆನ್ನಲ್ಲೇ ಕಿಚ್ಚ ಸುದೀಪ್, ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ವಂಚನೆ ಆರೋಪ: ಕಮಿಷನರ್‌ಗೆ ದೂರು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ