ಹೈಕಮಾಂಡ್ ತೀರ್ಮಾನದಂತೆ ಸಿಎಂ ಆಯ್ಕೆ ನಡೆಯುತ್ತದೆ: ಶಾಸಕ ಗೋಪಾಲಕೃಷ್ಣ ಬೇಳೂರು
ಶಿವಮೊಗ್ಗ: ” ಹೈಕಮಾಂಡ್ ತೀರ್ಮಾನದಂತೆ ಪಕ್ಷದಲ್ಲಿ ಸಿಎಂ ಆಯ್ಕೆ ನಡೆಯುತ್ತದೆ” ಎಂದು ಸಾಗರ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, “ಡಾ. ಯತೀಂದ್ರ ಅವರು ಸಿದ್ದರಾಮಯ್ಯ ರಾಜಕೀಯದ ಅಂತಿಮ ಘಟ್ಟದಲ್ಲಿದ್ದಾರೆಂದು ಹೇಳಿಕೆ ಯಾಕೆ ಕೊಟ್ಟರು ಅಂತಾ ಗೊತ್ತಿಲ್ಲ. ಆದರೆ, ನಮ್ಮಲ್ಲಿ ಮುಂದಿನ ಸಿಎಂ ಯಾರು ಎಂದು ಘೋಷಣೆ ಮಾಡೋದು ನಮ್ಮ ರಾಷ್ಟ್ರೀಯ ನಾಯಕರು” ಎಂದರು.
ನನಗೂ ಸಿಎಂ ಆಗಬೇಕು ಅಂತಾ ಇದೆ, ಮಾಡಿ ಬಿಡ್ತಾರಾ?: “ನಮ್ಮ ಹೈಕಮಾಂಡ್ ಆದೇಶದಂತೆ ನಾವು ನಡೆದುಕೊಳ್ಳುತ್ತೇವೆ. ನನಗೂ ಸಚಿವನಾಗಬೇಕು ಎಂಬ ಆಸೆ ಇದೆ. ಹಾಗಂತ ಕೊಟ್ಟು ಬಿಡ್ತಾರಾ?. ನಮ್ಮಲ್ಲಿ ಎಲ್ಲದಕ್ಕೂ ಕೇಂದ್ರ ನಾಯಕರು ಸೂಚನೆ ಕೊಡಬೇಕು. ಅವರ ಸೂಚನೆಯಂತೆ ನಮ್ಮ ನಿರ್ಧಾರ ಇರುತ್ತದೆ. ನಾನು ಸಿಎಂ ಆಗಬೇಕು ಅಂತಾನೂ ಇದೆ, ಹಾಗಂತ ಮಾಡಿ ಬಿಡ್ತಾರಾ?” ಎಂದು ಪ್ರಶ್ನಿಸಿದರು.
“ಯಾರು, ಯಾರು ಈ ರೀತಿ ಹೇಳಿಕೆ ನೀಡ್ತಾರೋ ಅದೆಲ್ಲಾ ಅವರ ವೈಯಕ್ತಿಕ ಹೇಳಿಕೆ ಆಗಿದೆ. ಆ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ, ಕೇಂದ್ರದ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ನಾನು ಯಾರ ಪರವಾಗಿಯೂ ಇಲ್ಲ, ನಾನು ಕಾಂಗ್ರೆಸ್ ಪಕ್ಷದ ಪರವಾಗಿದ್ದೇನೆ. ಎಂಎಲ್ಸಿ ಡಾ. ಯತೀಂದ್ರ ಅವರು ಯಾಕೆ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅದನ್ನು ಅವರನ್ನೇ ಕೇಳಬೇಕು. ಈಗ ಸಿದ್ಧರಾಮಯ್ಯ ಒಳ್ಳೆಯ ಆಡಳಿತ ನೀಡಿದ್ದಾರೆ. ಈಗ ಅವರ ಮಗನೇ ಯಾಕೆ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಮಗ ಹೇಳಿದ್ದು ನಡೆಯೋದಿಲ್ಲ ನಮ್ಮ ವರಿಷ್ಠರ ತೀರ್ಮಾನ ನಡೆಯುತ್ತದೆ. ಸತೀಶ್ ಜಾರಕಿಹೊಳಿಯವರು ಈ ಹಿಂದಿನ ಚುನಾವಣೆಯಲ್ಲೇ ‘ನಾನು 2028ರ ಚುನಾವಣೆ ನನ್ನ ಸಾರಥ್ಯದಲ್ಲಿ ನಡೆಯಬೇಕು ‘ ಎಂದು ಹೇಳಿದ್ದರು. ಆದರೆ ಕೇಂದ್ರದ ನಾಯಕರು ಹೇಳಿದಂತೆ ಅಂತಿಮವಾಗುತ್ತದೆ. ಯರ್ಯಾರೋ ಹೇಳಿದ್ದಕ್ಕೆ ನಮ್ಮಲ್ಲಿ ಬೆಲೆ ಇಲ್ಲ. ಅನೇಕ ಶಾಸಕರು ಅನೇಕ ಹೇಳಿಕೆ ನೀಡಿದ್ದಾರೆ. ಆದರೆ, ಆ ಹೇಳಿಕೆಗಳು ಅವರ ವೈಯಕ್ತಿಕ ಹೇಳಿಕೆಯಾಗಿದೆ” ಎಂದರು.
ಶರಾವತಿ ಪಂಪ್ಡ್ ಸ್ಟೋರೇಜ್ ಹೋರಾಟದ ಕುರಿತು: “ಪ್ರತಿಭಟನೆ ನಡೆಸಲು ಎಲ್ಲರಿಗೂ ಅವಕಾಶವಿದೆ. ಸ್ವಾಮೀಜಿಗಳಿಗೆ, ಜನರಿಗೆ ಪ್ರತಿಭಟನೆಗೆ ಅವಕಾಶವಿದೆ. ಈ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಹಿಂದಿನ ಸರ್ಕಾರದ ಅವಧಿಯಲ್ಲೇ ಈ ಬಗ್ಗೆ ತೀರ್ಮಾನಿಸಲಾಗಿತ್ತು. ಈ ಯೋಜನೆಯಿಂದ ಏನು ಪರಿಣಾಮ ಆಗುತ್ತದೆ ಎಂಬುದು ಯಾರೂ ಹೇಳುತ್ತಿಲ್ಲ. ಬಿಜೆಪಿಯವರ ಹಣ ಹೊಡೆಯುವ ಯೋಜನೆ ಇದಾಗಿತ್ತು. ಈಗ ಇದರ ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿಯವರಿಗೆ ದುಡ್ಡು ಹೊಡೆಯುವ ಕಲೆ ಗೊತ್ತು ಹಾಗಾಗಿ ಆರೋಪಿಸುತ್ತಿದ್ದಾರೆ. ಇವರ ಯೋಚನೆಗಳು, ದುಡ್ಡು ಹೊಡೆಯುವ ಯೋಜನೆ ಇವರಿಗೆ ತಿಳಿದಿದೆ. ಹಾಗಾಗಿ ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.
ಮುಂದುವರಿದು ಮಾತನಾಡಿದ ಅವರು, “ಈ ಯೋಜನೆ ನಿಲ್ಲಿಸಲು ಇವರೇನು ಇಂಜಿನಿಯರ್ಗಳಾ?. ಹಾಲಿ ಶರಾವತಿ ವಿದ್ಯುತ್ ಯೋಜನೆಯಲ್ಲಿ 1,465 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಯಾವುದೇ ಯೋಜನೆ ಆದರೂ ಸ್ವಲ್ಪ ಮಟ್ಟಿನ ಅರಣ್ಯ ಹೋಗಿಯೇ ಹೋಗುತ್ತದೆ. ಯೋಜನೆ ಕೈಗೆತ್ತಿಕೊಂಡಾಗ ಸ್ವಲ್ಪ ಮಟ್ಟಿನ ಪರಿಸರ ಹಾನಿ ಆಗಿಯೇ ಆಗುತ್ತದೆ. ಆದರೆ, ರೈತ ಸಂಘದ ಜೊತೆಗೆ ಕೂತು ಬಿಜೆಪಿಯವರು ಹೋರಾಟ ಮಾಡುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.
ಮಳೆ ಹಾನಿ ಪರಿಹಾರ: “ರಾಜ್ಯದಲ್ಲಿ ಮಳೆಯಿಂದಾಗಿ ಹಲವಾರು ಜನರು ಮನೆ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಈ ಬಾರಿ ಮಳೆ ಮತ್ತೆ, ಮತ್ತೆ ಬರುತ್ತಲೇ ಇದೆ. ಮನೆ ಕಳೆದುಕೊಂಡವರಿಗೆ ಹಾಗೂ ಅಡಕೆ ಹಾನಿಯಾದ ರೈತರಿಗೆ ಪರಿಹಾರ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ” ಎಂದರು.
Laxmi News 24×7