ಕೊಪ್ಪಳ, ಅಕ್ಟೋಬರ್ 14: ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು (Abhinava Gavisiddeshwara Swamiji) ನಡೆದಾಡುವ ದೇವರು ಎಂದೇ ಪ್ರಸಿದ್ದ. ಅವರ ದರ್ಶನಕ್ಕಾಗಿ ಪ್ರತಿನಿತ್ಯ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೀಗಿರುವಾಗ ಸ್ವಾಮೀಜಿಯ ಅದೊಂದು ನಡೆ ಮಾತ್ರ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ. ವಾರದಲ್ಲಿ ಒಂದು ದಿನ ಮಾತ್ರ ಮೌನ ಅನುಷ್ಠಾನ ಆಚರಿಸುತ್ತಿದ್ದ ಅವರು, ಇದೀಗ ವಾರದಲ್ಲಿ ಆರು ದಿನ ಮೌನ ಅನುಷ್ಠಾನದ ಮೊರೆಹೋಗುತ್ತಿದ್ದಾರೆ. ಆ ಮೂಲಕ ಕಾರ್ಖಾನೆಯೊಂದರ ವಿಚಾರವಾಗಿ ಪರೋಕ್ಷವಾಗಿ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಚಾರ ಅವರ ಭಕ್ತರ ಮಧ್ಯೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸ್ಥಗಿತಗೊಳ್ಳದ ಕಾರ್ಖಾನೆ
2025 ಫೆಬ್ರವರಿ 24ರಂದು ಕೊಪ್ಪಳ ಗವಿಮಠದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬಿಎಸ್ಪಿಎಲ್ ಕಾರ್ಖಾನೆ ನಿರ್ಮಾಣ ವಿರೋಧಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗವಿಸಿದ್ದೇಶ್ವರ ಸ್ವಾಮೀಜಿ ಕಾರ್ಖಾನೆ ಸ್ಥಗಿತದ ಆದೇಶ ಕಾಪಿ ತೆಗೆದುಕೊಂಡು ಬನ್ನಿ ಎಂದು ಜಿಲ್ಲೆಯ ಜನಪ್ರತಿನಿಧಿಗಳಿಗೆ ಸೂಚನೆ ನೀಡಿದ್ದರು. ಅದಾದ ಬಳಿಕ ಮಾರ್ಚ್ 4 ರಂದು ಸಿಎಂ ಸಿದ್ದರಾಮಯ್ಯ, ಜಿಲ್ಲಾಧಿಕಾರಿಗೆ ಫೋನ್ ಮಾಡಿ ಬಿಎಸ್ಪಿಎಲ್ ಕಾರ್ಖಾನೆ ಕೆಲಸ ಸ್ಥಗಿತ ಮಾಡಲು ಮೌಖಿಕ ಸೂಚನೆ ನೀಡಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಷ್ಟೇ ಬಂತು ಹೊರತು ವಾಸ್ತವದಲ್ಲಿ ಇಲ್ಲಿಯವರೆಗೂ ಕಾರ್ಖಾನೆ ಸ್ಥಗಿತದ ಯಾವುದೇ ಸೂಚನೆ ಸಹ ಕಾಣುತ್ತಿಲ್ಲ.
ಇದರಿಂದಾಗಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಗವಿಸಿದ್ದೇಶ್ವರ ಸ್ವಾಮೀಜಿ ಬೇಸರ ಮಾಡಿಕೊಂಡಿದ್ದಾರೆ. ಹೀಗಾಗಿ ಸ್ಚಾಮೀಜಿ ವಾರದ 6 ದಿನಗಳ ಕಾಲ ಮೌನ ಅನುಷ್ಠಾನದ ಮೊರೆ ಹೋಗಿದ್ದು, ಕೇವಲ ಸೋಮವಾರ ಒಂದು ದಿನ ಮಾತ್ರ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಅವರ ಈ ನಿರ್ಧಾರದಿಂದ ಭಕ್ತರಲ್ಲಿ ಅಚ್ಚರಿ ಜೊತೆಗೆ ಬೇಸರ ತರಿಸಿದೆ.
ಕಣ್ಣೀರಿಟ್ಟಿದ್ದ ಸ್ವಾಮೀಜಿ
ಬಿಎಸ್ಪಿಎಲ್ ಕಾರ್ಖಾನೆ 980 ಎಕರೆ ಪ್ರದೇಶದಲ್ಲಿ 54 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಕಾರ್ಖಾನೆ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಆರಂಭವಾಗುತ್ತಿದೆ. ಹಾಗೊಂದು ವೇಳೆ ಈ ಕಾರ್ಖಾನೆ ಆರಂಭಗೊಂಡರೆ ಕೊಪ್ಪಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಕಾರಣದಿಂದಾಗಿ ಗವಿಸಿದ್ದೇಶ್ವರ ಸ್ವಾಮೀಜಿ, ಫೆಬ್ರವರಿ 4 ರಂದು ನಡೆದ ಹೋರಾಟದ ದಿನ ಕಾರ್ಖಾನೆ ಆರಂಭವಾದರೆ ಕೊಪ್ಪಳ ತೊರೆಯುವೆ ಎಂದು ಕಣ್ಣೀರಿಡುತ್ತಾ ಹೇಳಿದ್ದರು. ಜೊತೆಗೆ ಕೊಪ್ಪಳದಲ್ಲಿ ತೊಟ್ಟಿಲು ತೂಗುವ ಕೈಗಳಿಗಿಂತ ಸ್ಮಶಾನಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಲಿದೆ ಎಂದಿದ್ದರು. ಈ ಎಲ್ಲ ಕಾರಣಗಳಿಗಾಗಿ ಇದೀಗ ಗವಿಸಿದ್ದೇಶ್ವರ ಸ್ವಾಮೀಜಿ ಮೌನ ಅನುಷ್ಠಾನದ ಮೊರೆ ಹೋಗಿದ್ದು, ಇದು ಸಹಜವಾಗಿಯೇ ಭಕ್ತರಲ್ಲಿ ಆತಂಕ ಮೂಡಿಸಿದೆ.ಒಟ್ಟಿನಲ್ಲಿ ಇಷ್ಟು ದಿನ ಕಾರ್ಖಾನೆ ಬಂದ್ ಆಗಬಹುದು ಎಂದು ಆಶಾಭಾವದಲ್ಲಿದ್ದ ಗವಿಸಿದ್ದೇಶ್ವರ ಸ್ವಾಮೀಜಿಯವರಿಗೆ ನಿರಾಸೆಯಾಗಿದ್ದು, ಮೌನ ಅನುಷ್ಠಾನದ ಮೊರೆ ಹೋಗಿದ್ದಾರೆ. ಗವಿಸಿದ್ದೇಶ್ವರ ಸ್ವಾಮೀಜಿಯವರ ಈ ನಿರ್ಧಾರ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.