ಬೆಳಗಾವಿ- ಇದೇ ಅಕ್ಟೋಬರ್ 19 ರಂದು ನಡೆಯುವ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕಿನ ಚುನಾವಣೆಯನ್ನು ಎದುರಿಸಲು ನಮ್ಮ ಗುಂಪು ಸಿದ್ಧಗೊಂಡಿದ್ದು, ಬ್ಯಾಂಕಿನ ಅಧಿಕಾರ ಚುಕ್ಕಾಣಿ ಹಿಡಿಯಲು ಸನ್ನದ್ಧರಾಗಿದ್ದೇವೆ ಎಂದು ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು.
ಗುರುವಾರದಂದು ಇಲ್ಲಿನ ಬಿಡಿಸಿಸಿ ಬ್ಯಾಂಕಿಗೆ ತಮ್ಮ ಬೆಂಬಲಿಗರಿಂದ ನಾಮಪತ್ರಗಳನ್ನು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ, ನಮ್ಮ ಗುಂಪಿಗೆ ಬಹುಮತ ಪಡೆಯಲು ಮತದಾರರ ಆಶೀರ್ವಾದವನ್ನು ಪಡೆಯುವುದಾಗಿ ಅವರು ಹೇಳಿದರು.
ನಿಪ್ಪಾಣಿಯಿಂದ ಅಣ್ಣಾಸಾಹೇಬ ಜೊಲ್ಲೆ, ರಾಯಬಾಗದಿಂದ ಅಪ್ಪಾಸಾಹೇಬ ಕುಲಗೋಡೆ, ಯರಗಟ್ಟಿಯಿಂದ ವಿಶ್ವಾಸ ವೈದ್ಯ , ಚ.ಕಿತ್ತೂರಿಂದ ವಿಕ್ರಮ ಇನಾಂದಾರ,
ಖಾನಾಪೂರದಿಂದ, ಅರವಿಂದ ಪಾಟೀಲ, ಸವದತ್ತಿಯಿಂದ ವಿರುಪಾಕ್ಷ ಮಾಮನಿ,ಬೈಲಹೊಂಗಲ ದಿಂದ ಮಹಾಂತೇಶ ದೊಡ್ಡಗೌಡರ ಇಂದು ನಾಮಪತ್ರಗಳನ್ನು ಸಲ್ಲಿಸಿದ್ದು, ಉಳಿದ ಮೂಡಲಗಿ, ಗೋಕಾಕ, ರಾಮದುರ್ಗ, ಬೆಳಗಾವಿ, ಹುಕ್ಕೇರಿ ಮತ್ತು ಇತರೇ ಕ್ಷೇತ್ರದಿಂದ ಒಬ್ಬರು ಸೇರಿ ಒಟ್ಟು 6 ಅಭ್ಯರ್ಥಿಗಳು ನಾಳೆ ಬರುವ ಶನಿವಾರದಂದು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲಿದ್ದಾರೆ ಎಂದು ಅವರು ಮಾಹಿತಿಯನ್ನು ನೀಡಿದರು.
ನಮ್ಮ ಗುಂಪಿನಿಂದ ಒಟ್ಟು 13 ಅಭ್ಯರ್ಥಿಗಳ ನಾಮಪತ್ರಗಳನ್ನು ಸಲ್ಲಿಸುತ್ತಿದ್ದು,
ಎಲ್ಲ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಹೊಂದಿದ್ದೇವೆ. ಒಟ್ಟಿನಲ್ಲಿ ಚುನಾವಣೆಗೆ ನಾವು ರೆಡಿಯಾಗಿದ್ದೇವೆ ಎಂದು ಹೇಳಿದರು.
ಈ ಸಲ ಜಾರಕಿಹೊಳಿಯವರ ಕುಟುಂಬದಿಂದ ಯಾರನ್ನಾದರೂ ಸ್ಪರ್ಧೆ ಮಾಡಿಸುವ ವಿಚಾರವಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರು ಬೆಂಗಳೂರಿನಿಂದ ಬಂದ ನಂತರ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯವನ್ನು ಕೈಕೊಳ್ಳುವುದಾಗಿ ಹೇಳಿದರು.
ಯಾವುದಕ್ಕೂ ಶನಿವಾರ 11 ರಂದು ಮಧ್ಯಾಹ್ನದೊಳಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಅಂತಿಮ ಚಿತ್ರಣವೇ ಸಿಗಲಿದೆ. ಇಲ್ಲಿಯತನಕ ಗೋಕಾಕ- ಮೂಡಲಗಿ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಿರುವುದಿಲ್ಲ. ಶನಿವಾರ ದಿನವೇ ಇದಕ್ಕೆ ಸ್ಪಷ್ಟ ಉತ್ತರವು ಸಿಗಲಿದೆ ಎಂದು ಅವರು ತಿಳಿಸಿದರು.
ಇತರೇ ಕ್ಷೇತ್ರದಿಂದ ಸುಮಾರು 5-6 ಜನ ಆಕಾಂಕ್ಷಿಗಳಿದ್ದು, ಸತೀಶ್ ಜಾರಕಿಹೊಳಿಯವರೊಂದಿಗೆ ಚರ್ಚಿಸಿ ಅಭ್ಯರ್ಥಿಯನ್ನು ಅಂತಿಮ ಮಾಡುವುದಾಗಿ ಅವರು ಹೇಳಿದರು.
ಕೆಲವರಿಗೆ ಅವಿರೋಧವಾಗಿ ಆಯ್ಕೆ ಮಾಡುವ ಇಚ್ಚೆ ಇಲ್ಲದಿರಬಹುದು. ಅದಕ್ಕಾಗಿ ಚುನಾವಣೆಗೆ ನಾಮಪತ್ರಗಳು ಸಲ್ಲಿಕೆಯಾಗುತ್ತಿವೆ. ಕೆಲವು ಕ್ಷೇತ್ರಗಳಲ್ಲಿ ಚುನಾವಣೆಗಳು ಜಿದ್ದಾ- ಜಿದ್ದಿನಿಂದ ಕೂಡಿದರೆ, ಕೆಲವೆಡೆ ನಾಮಕಾ ವಾಸ್ತೆ ನಡೆಯಲಿವೆ. ಈ ಚುನಾವಣೆಯಲ್ಲಿ ನಮ್ಮ ಗುಂಪು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳು ಇದ್ದು, ರೈತರ ಸಹಕಾರ ಮತ್ತು ಆಶೀರ್ವಾದವೇ ನಮ್ಮ ಗೆಲುವಿಗೆ ಕಾರಣವಾಗಲಿವೆ ಎಂದು ಬಾಲಚಂದ್ರ ಜಾರಕಿಹೊಳಿಯವರು ಆಶಾ ಭಾವನೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಅಣ್ಣಾಸಾಹೇಬ ಜೊಲ್ಲೆ, ಅಪ್ಪಾಸಾಹೇಬ ಕುಲಗೋಡೆ, ಮಹಾಂತೇಶ ದೊಡಗೌಡರ, ಅರವಿಂದ ಪಾಟೀಲ, ವಿರುಪಾಕ್ಷಿ ಮಾಮನಿ, ವಿಕ್ರಂ ಇನಾಂದಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.