ನವದೆಹಲಿ: ಜನವರಿ 1ರಿಂದ ದೇಶದ ಎಲ್ಲ 4 ಚಕ್ರ ಮೇಲ್ಪಟ್ಟ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಫಾಸ್ಟ್ ಟ್ಯಾಗ್ ಉಪಯುಕ್ತವಾಗಿದ್ದು, ವಾಹನಗಳನ್ನು ಎಲ್ಲ ಟೋಲ್ ಪ್ಲಾಜಾಗಳಲ್ಲಿ ನಿಲ್ಲಿಸುವ ಅಗತ್ಯವಿಲ್ಲ. ಇದರಿಂದ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸಹ ಈ ಕುರಿತು ಆದೇಶ ಹೊರಡಿಸಿತ್ತು. ಹಳೆ ವಾಹನ ಸೇರಿ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದು ತಿಳಿಸಿತ್ತು.
ನವೆಂಬರ್ 2020ರಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸುತ್ತೋಲೆ ಹೊರಡಿಸಿ, ಫಾಸ್ಟ್ ಟ್ಯಾಗ್ ಮೂಲಕ ಡಿಜಿಟಲ್ ಹಾಗೂ ಐಟಿ ತಂತ್ರಜ್ಞಾನ ಆಧರಿತ ಶುಲ್ಕ ಪಾವತಿಯನ್ನು ಉತ್ತೇಜಿಸಲಾಗುವುದು. ಜನವರಿ 1, 2021ರಿಂದ ಹಳೆ ವಾಹನಗಳು ಸೇರಿ ಎಂ ಹಾಗೂ ಎನ್ ಮಾದರಿಯ ಎಲ್ಲ ವಾಹನಗಳಿಗೆ ಕಡ್ಡಾಯವಾಗಿದೆ ಎಂದು ತಿಳಿಸಿದೆ.
: ಡಿಸೆಂಬರ್ 1,2017ರಿಂದ ಇತ್ತೀಚಿನ ನಾಲ್ಕು ಚಕ್ರದ ವಾಹನಗಳ ನೋಂದಣಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ವಾಹನ ಉತ್ಪಾದನೆ ಕಂಪನಿಗಳು ಅಥವಾ ಡೀಲರ್ ಗಳು ಫಾಸ್ಟ್ ಟ್ಯಾಗ್ ಕಡ್ಡಾಯವಾಗಿ ನೀಡಬೇಕು. ಅಲ್ಲದೆ ಫಿಟ್ನೆಸ್ ಸರ್ಟಿಫಿಕೇಟ್ ನವೀಕರಿಸಬೇಕಾದರೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದೆ. ನ್ಯಾಷನಲ್ ಪರ್ಮಿಟ್ ವಾಹನಗಳಿಗೆ ಅಕ್ಟೋಬರ್ 1, 2019ರಿಂದಲೇ ಕಡ್ಡಾಯಗೊಳಿಸಲಾಗಿದೆ ಎಂದು ಸಾರಿಗೆ ಸಚಿವಾಲಯ ಸ್ಪಷ್ಟಪಡಿಸಿದೆ.