ಹುಬ್ಬಳ್ಳಿ: ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್ ಖೊಂಡೋನಾಯ್ಕ್ಗೆ ಜಾಮೀನು ನಿರಾಕರಿಸಿದೆ.
ನೇಹಾ ಕೊಲೆ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಇವತ್ತಿಗೆ ಕಾಯ್ದಿರಿಸಲಾಗಿತ್ತು. ಇಂದು ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ನೇಹಾ ಹಿರೇಮಠ ಪರ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಮಹೇಶ ವೈದ್ಯ, ವಕೀಲ ರಾಘವೇಂದ್ರ ಮುತ್ಗೀಕರ ವಾದ ಮಂಡಿಸಿದರು. ಫಯಾಜ್ ಪರವಾಗಿ ಝಡ್ ಎಂ ಹತ್ತರಕಿ ವಾದ ಮಂಡಿಸಿದರು.
2024ರ ಏಪ್ರಿಲ್ 18 ರಂದು ಹುಬ್ಬಳ್ಳಿ ಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿಯೇ ಬರ್ಬರ ಕೊಲೆಯಾಗಿತ್ತು.
ನೇಹಾ ಹಿರೇಮಠ ಹತ್ಯೆ ಮಾಡಿದ್ದ ಆರೋಪಿ ಫಯಾಜ್ನ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಜಾಮೀನು ತಿರಸ್ಕರಿಸಿದ್ದು, ಮುಂದಿನ ವಿಚಾರಣೆಯನ್ನು ಆಗಸ್ಟ್ 6ಕ್ಕೆ ಮುಂದೂಡಿದೆ. ಆಗಸ್ಟ್ 6ಕ್ಕೆ ಫಯಾಜ್ ಖುದ್ದು ಹಾಜರಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ಆರೋಪಿಗೆ ಜಾಮೀನು ನಿರಾಕರಣೆ ಕುರಿತು ನೇಹಾ ಹಿರೇಮಠ ಪರ ವಕೀಲ ಮಹೇಶ ವೈದ್ಯ ಮಾತನಾಡಿ, “ಆರೋಪಿ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕಾರ ಮಾಡಿ, ಇದೇ ಆ.6 ರಂದು ಆರೋಪಿಯನ್ನು ಖುದ್ದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಆದೇಶ ನೀಡಿದೆ. ಆರೋಪಿ ಪರ ವಕೀಲರು ತಾಂತ್ರಿಕ ಕಾರಣ ಇಟ್ಟುಕೊಂಡು ಜಾಮೀನಿಗೆ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ಇದನ್ನು ತಿರಸ್ಕಾರ ಮಾಡಿದ್ದು, ಮುಂದೆಯೂ ಕೂಡ ಕಾನೂನು ಹೋರಾಟ ನಡೆಯಲಿದೆ” ಎಂದರು.