ಚಿಕ್ಕಬಳ್ಳಾಪುರ: ಹಸು ಮೇಯಿಸಲು ಹೋಗಿದ್ದ ರೈತನ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಗ್ರಾಮಸ್ಥರು ಹಿಡಿದು ಅರಣ್ಯ ಇಲಾಖೆ ವಶಕ್ಕೆ ನೀಡಿದ್ದಾರೆ.
ಜಿಲ್ಲೆಯ ಗುಂಡಿಬಂಡೆ ತಾಲೂಕಿನ ವರ್ಲಕೊಂಡ ಬೆಟ್ಟದಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಚಿರತೆಯನ್ನು ಸೆರೆ ಹಿಡಿಯುವಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಈ ನಡುವೆ ನಿನ್ನೆ ಬೆಳಗ್ಗೆ ಚಿರತೆ ದಾಳಿಯ ಆತಂಕದಲ್ಲಿಯೇ ಕರೇನಹಳ್ಳಿಯ ರೈತ ರಾಮಕೃಷ್ಣಪ್ಪ ಹಸು ಮೇಯಿಸಲು ವರ್ಲಕೊಂಡ ಬೆಟ್ಟದ ಕಡೆ ಹೋಗಿದ್ದರು.
ಈ ವೇಳೆ ಚೊಕ್ಕನಹಳ್ಳಿಯ ಕೆರೆ ಬಳಿ ಚಿರತೆ ಏಕಾಏಕಿ ರಾಮಕೃಷ್ಣಪ್ಪನ ಮೇಲೆ ದಾಳಿ ಮಾಡಿದೆ. ಅವರು ಜೋರಾಗಿ ಕೂಗಿ ಕೊಂಡಾಗ ಚಿರತೆ ಅಲ್ಲಿಂದ ಪರಾರಿಯಾಗಿತ್ತು. ರೈತನ ಚೀರಾಟ ಕೇಳಿ ಸ್ಥಳಕ್ಕೆ ಗ್ರಾಮಸ್ಥರು ಆಗಮಿಸಿ ರಕ್ಷಿಸಿದ್ದರು. ಇದರಿಂದ ಆಕ್ರೋಶಿತಗೊಂಡಿದ್ದ ಗ್ರಾಮಸ್ಥರು ನಿನ್ನೆಯೇ ಬೆಟ್ಟದಲ್ಲಿ ಅಡಗಿದ ಚಿರತೆಯನ್ನು ಸೆರೆ ಹಿಡಿದು ಅರಣ್ಯ ಇಲಾಖೆಯ ವಶಕ್ಕೆ ನೀಡಿದ್ದಾರೆ.
ವರ್ಲಕೊಂಡ ಬೆಟ್ಟದಲ್ಲಿ ಮೂರು ಚಿರತೆಗಳು ವಾಸವಾಗಿದ್ದು, ಆಗಾಗ ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದವು. ಡ್ರೋನ್ ಕ್ಯಾಮರಾ ಮೂಲಕ ಸರ್ವೆ ಮಾಡಿದ್ದಾಗ, ಬೆಟ್ಟದಲ್ಲಿ ವಾಸವಾಗಿರುವ ಚಿರತೆಗಳ ದೃಶ್ಯ ಸೆರೆಯಾಗಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ಕಳೆದೊಂದು ವಾರದ ಹಿಂದೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು, ಅರಣ್ಯ ಇಲಾಖೆ ಬೋನ್ ಸಹ ಇಟ್ಟಿದ್ದರು. ಆದರೆ ಬೋನ್ಗೆ ಬೀಳದ ಚಿರತೆಯನ್ನು ಗ್ರಾಮಸ್ಥರೇ ಮುಂದಾಗಿ ಸೆರೆ ಹಿಡಿದಿರುವುದು ಶ್ಲಾಘನೀಯ.