ಬಾಗಲಕೋಟೆ: ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ನಾಲ್ಕೂವರೆ ವರ್ಷ ಎಂಬಿಬಿಎಸ್ ಮುಗಿಸಿ ಇಂಟರ್ಶಿಪ್‍ನಲ್ಲಿದ್ದ ವಿದ್ಯಾರ್ಥಿ ಲಕ್ಷ್ಮೀಪುತ್ರ ಬಿ.ಕುಲಕರ್ಣಿ (24) ಸೋಮವಾರ ಬೆಂಗಳೂರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಎರಡು ದಿನಗಳ ಹಿಂದಷ್ಟೇ ರಜೆ ಮೇಲೆ ಸಂಬಂಧಿಕರ ಜೊತೆ ಲಕ್ಷ್ಮೀಪುತ್ರ ಬೆಂಗಳೂರಿಗೆ ಹೋಗಿದ್ದರು. ಅಲ್ಲಿಂದ ತಮಿಳುನಾಡಿಗೆ ಪ್ರವಾಸಕ್ಕೆ ಹೋಗಿ ವಾಪಸ್ ಬರುತ್ತಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿ ಬೆಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲೇ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹೃದಯಾಘಾತದಿಂದ ಸಾವನ್ನಪ್ಪಿರುವ ಲಕ್ಷೀಪುತ್ರ ಮೂಲತಃ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದವರು. ಮೆಡಿಕಲ್ ಓದಲು ಬಾಗಲಕೋಟೆ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜ್‍ನಲ್ಲಿ ಪ್ರವೇಶ ಪಡೆದಿದ್ದರು. 2019-20ನೇ ಸಾಲಿನಲ್ಲಿ ಎಂಬಿಬಿಎಸ್ ಪವೇಶ ಪಡೆದು, ಈಗಾಗಲೇ ನಾಲ್ಕೂವರೆ ವರ್ಷ ಅಧ್ಯಯನ ಮುಗಿಸಿ ಸದ್ಯ ಇಂಟರ್ನ್ಶಿಪ್ನಲ್ಲಿ ಇದ್ದರು. ಇದೇ ಜುಲೈ 10ಕ್ಕೆ ಇಂಟರ್ನ್ಶಿಪ್ ಪೂರ್ಣಗೊಂಡು ವೈದ್ಯಕೀಯ ಸೇವೆಗೆ ಅಣಿಯಾಗಬೇಕಿದ್ದ ಲಕ್ಷ್ಮೀಪುತ್ರ ಇದೀಗ ಹೃದಯಾಘಾತ ಸಂಭವಿಸಿದ ಪರಿಣಾಮ ಪ್ರಾಣ ಬಿಟ್ಟಿದ್ದಾರೆ.
ಇತ್ತೀಚಿಗೆ ಯುವಕರಲ್ಲಿ ಹೆಚ್ಚು ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಮೆಡಿಕಲ್ ಕಾಲೇಜ್ ವಿದ್ಯಾರ್ಥಿ ಇನ್ನೇನು ವೃದ್ಯಕೀಯ ಶಿಕ್ಷಣ ಮುಗಿಸಿ, ತನ್ನ ಹಾಗೂ ಕುಟುಂಬ ಸದಸ್ಯರ ಕನಸು ನನಸು ಮಾಡುವ ಕ್ಷಣದಲ್ಲೇ ವಿಧಿಯಾಟ ಬೇರೆಯದ್ದೇ ಆಗಿದೆ. ಹೃದಯಾಘಾತದಿಂದ ವಿದ್ಯಾರ್ಥಿ ಅಕಾಲಿಕವಾಗಿ ಮೃತಪಟ್ಟಿದ್ದಾರೆ.