ಬೆಳಗಾವಿ: ಹಿಂದೆ 40 ಪರ್ಸೆಂಟ್ ಅಂತಾ ಬಿಜೆಪಿ ಸರ್ಕಾರದ ಮೇಲೆ ಆಪಾದನೆ ಮಾಡಿದ್ದರು. ಅದನ್ನು ಅವರು ಸಾಬೀತು ಮಾಡಲಿಲ್ಲ. ಆದರೆ, ಅವರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರ ಹೇಳಿಕೆಯಿಂದಲೇ ಸಾಬೀತಾಗಿದೆ. ಹಾಗಾಗಿ, ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅದಕ್ಕೆ ಬಿ.ಆರ್. ಪಾಟೀಲ ಅವರ ಹೇಳಿಕೆಯೇ ಸಾಕ್ಷಿಯಾಗಿದೆ. ಭ್ರಷ್ಟಾಚಾರಕ್ಕೆ ಪೂರಕವಾದ ಸಾಕ್ಷಿ ಸಾಬೀತಾಗಿದೆ. ಸರ್ಕಾರ ದಿವಾಳಿ ಆಗಿದೆ. ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕೆಲಸಗಳೇ ಈಗಲೂ ನಡೆಯುತ್ತಿವೆ. ಈ ಸರ್ಕಾರ ಬಂದ ಮೇಲೆ ನಮ್ಮ ಯಾವುದೇ ಕೆಲಸ ಆಗುತ್ತಿಲ್ಲ ಅಂತಾ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ಎಂದರು.