ಅಮೃತ ಭಾರತ್ ಯೋಜನೆಯಡಿ 16.06 ಕೋಟಿ ರೂ. ವೆಚ್ಚದಲ್ಲಿ ಬಾಗಲಕೋಟೆ ರೈಲು ನಿಲ್ದಾಣದ ನವೀಕರಣ…
ಇಂದು ಪಿಎಂ ಮೋದಿ ಅವರಿಂದ ಲೋಕಾರ್ಪಣೆ….
ಅಮೃತ ಭಾರತ್ ರೈಲು ನಿಲ್ದಾಣ ಯೋಜನೆ ಅಡಿಯಲ್ಲಿ ಕರ್ನಾಟಕದ ಐದು ರೈಲು ನಿಲ್ದಾಣಗಳನ್ನು ನವೀಕರಿಸಲಾಗಿದ್ದು ಈ ಐದು ರೈಲು ನಿಲ್ದಾಣಗಳಲ್ಲಿ ಬಾಗಲಕೋಟೆ ರೈಲ್ವೆ ಸ್ಟೇಷನ್ ಕೂಡ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುರುವಾರ ವರ್ಚುವಲ್ ಮೂಲಕ ಬಾಗಲಕೋಟೆ ಸೇರಿದಂತೆ ರಾಜ್ಯದ ಐದು ನವೀಕೃತ ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿದ್ದಾರೆ.
ಲೋಕಾರ್ಪಣೆಗೆ ಬಾಗಲಕೋಟೆ ರೈಲ್ವೆ ನಿಲ್ದಾಣ ಸಜ್ಜಾಗಿದೆ. ಬಾಗಲಕೋಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭಾಗಿಯಾಗಲಿದ್ದಾರೆ.ಬಾಗಲಕೋಟೆ ರೈಲು ನಿಲ್ದಾಣ ಒಟ್ಟು 16.06 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿದೆ.
ಮಹಿಳೆಯರು, ಪುರುಷರಿಗೆ ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ಸುಸಜ್ಜಿತ ಶೌಚಾಲಯಗಳ ವ್ಯವಸ್ಥೆ ಇದೆ. ವಿಶಾಲವಾದ ಕಾಯುವ ಕೊಠಡಿಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಸ್ಥಳೀಯ ಸಂಸ್ಕೃತಿ, ವಾಸ್ತುಶಿಲ್ಪವನ್ನು ರೈಲು ನಿಲ್ದಾಣದ ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಸೋಲಾರ್ ವಿದ್ಯುತ್ ಘಟಕ, ಜೊತೆಗೆ, ಮಳೆ ನೀರು ಕೊಯ್ಲು ಮತ್ತು ತ್ಯಾಜ್ಯ ನಿರ್ವಹಣಾ ಘಟಕ ಇದೆ.
ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಲಿಫ್ಟ್ ಮತ್ತು ಎಸ್ಕಲೇಟರ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ಸಾಮಾನ್ಯ ಟಿಕೆಟ್ ಕೊಳ್ಳುವಿಕೆಗಾಗಿ ಕನಿಷ್ಠ ಮೂರು ಮತ್ತು ಗರಿಷ್ಠ ಐದು ಕೌಂಟರ್ಗಳನ್ನು ತೆರೆಯಲಾಗಿದೆ. ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ.