ಬೆಂಗಳೂರು: ಇಂದು ಕರೆಯಲಾಗಿದ್ದ ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರು ಕೈಕೈ ಮಿಲಾಯಿಸಿರುವ ಘಟನೆ ನಡೆದಿದೆ. ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆಯೇ ಸಭಾಪತಿ ಕುರ್ಚಿಯಲ್ಲಿ ಉಪಸಭಾಪತಿ ಧರ್ಮೇಗೌಡ ಕುಳಿತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಗದ್ದಲ ಆರಂಭಿಸಿದ್ದಾರೆ.
ಪರಿಷತ್ ಉಪಸಭಾಪತಿಯನ್ನು ಕುರ್ಚಿಯಿಂದ ಕೆಳಗೆಳೆದು ತಂದಿದ್ದಾರೆ. ಈ ವೇಳೆ ಬಿಜೆಪಿ ಸದಸ್ಯರು ಮಧ್ಯಪ್ರವೇಶಿಸಿದ್ದಾರೆ. ಒಂದು ಹಂತದಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಸದಸ್ಯರ ನಡುವೆ ನೂಕಾಟ-ತಳ್ಳಾಟ ನಡೆದಿದ್ದು, ಕೊರಳಪಟ್ಟಿ ಹಿಡಿದು ಎಳೆದಾಡಿಕೊಂಡಿದ್ದಾರೆ.
ತಳ್ಳಾಟದ ವೇಳೆ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಕೆಳಗೆ ಬಿದ್ದ ಘಟನೆ ನಡೆದಿದೆ. ಸದನ ಸಮರಾಂಗಣವಾಗಿ ಮಾರ್ಪಡುತ್ತಿದ್ದಂತೆಯೇ ಸಭಾಪತಿ ಪ್ರತಾಪ್ ಚಂದ್ರ ಶಟ್ಟಿ, ವಿಧಾನ ಪರಿಷತ್ ಕಲಾಪವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಿದರು.