ಬೆಂಗಳೂರು: ವಿತ್ತೀಯ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಇಂದು ತಮ್ಮ ಬಜೆಟ್ ಮಂಡಿಸಿದ್ದಾರೆ. ತವರಾದ ಮೈಸೂರು ಜಿಲ್ಲೆ ಸೇರಿದಂತೆ, ಎಲ್ಲಾ ಜಿಲ್ಲೆಗಳಿಗೆ ಆದ್ಯತೆ ನೀಡುವ ಪ್ರಯತ್ನ ಮಾಡಿದ್ದಾರೆ. ಇಂದಿನ ತಮ್ಮ ದಾಖಲೆಯ ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳನ್ನು ಸಹ ಪ್ರಕಟಿಸಿದ್ದಾರೆ.
2025-26ನೇ ಸಾಲಿನ ಬಜೆಟ್‌ನಲ್ಲಿ, ರಾಜ್ಯದ 31 ಜಿಲ್ಲೆಗಳಿಗೂ ನ್ಯಾಯ ವದಗಿಸುವ ಯತ್ನ ಮಾಡಿರುವ ಸಿಎಂ ಸಿದ್ದರಾಮಯ್ಯ, ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ರಾಜ್ಯದ ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಗಮನ ಹರಿಸಿದ್ದಾರೆ. ಯಾವ ಜಿಲ್ಲೆಗೆ ಏನೆಲ್ಲಾ ಸಿಕ್ಕಿತು ಎಂಬುದರ ಕುರಿತು ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
- ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಒಟ್ಟಾರೆ 300 ಹೆಕ್ಟೇರ್ ಪ್ರದೇಶದಲ್ಲಿ ಸಮಗ್ರ ಮಣ್ಣು ಮತ್ತು ನೀರಿನ ನಿರ್ವಹಣೆ, ಸಮರ್ಪಕ ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆ ಮತ್ತು ಸಮತೋಲನ, ಪೋಷಕಾಂಶಗಳ ನಿರ್ವಹಣೆಯನ್ನು ಸಕ್ಕರೆ ಕಾರ್ಖಾನೆಗಳ ಸಹಯೋಗದೊಂದಿಗೆ ಜಾರಿ.
- ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ 2ನೇ ಹಂತದ ಕಾಮಗಾರಿಗೆ 250 ಕೋಟಿ ರೂ. ನಿಗದಿ.
- ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರಿಗೆ ಅನುಕೂಲವಾಗುವಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಕ್ವಿಂಟಲ್ಗೆ 7550 ರೂ., ಜೊತೆಗೆ ಸರ್ಕಾರದ ವತಿಯಿಂದ ಹೆಚ್ಚುವರಿ ಪ್ರೋತ್ಸಾಹ ಧನ 450 ರೂ.ಗಳಂತೆ ನೀಡಲು ಒಟ್ಟು 138 ಕೋಟಿ ರೂ. ನಿಗದಿ.
- 2011 ಕೋಟಿ ರೂ. ಅಂದಾಜು ಮೊತ್ತದ ಚಿತ್ರದುರ್ಗ ಶಾಖಾ ಕಾಲುವೆ ಪೂರ್ಣಗೊಳಿಸುವ ಮೂಲಕ ಹೊಸದುರ್ಗ, ಹೊಳಲ್ಕೆರೆ, ಜಗಳೂರು, ಮೊಳಕಾಲ್ಮುರು, ಚಳ್ಳಕೆರೆ ಮತ್ತು ಪಾವಗಡ ತಾಲೂಕುಗಳಲ್ಲಿನ 30 ಕೆರೆಗಳನ್ನು ತುಂಬಿಸಿ 1 ಲಕ್ಷ 77 ಸಾವಿರ ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು.
- ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆಯಡಿ 200 ಕೋಟಿ ರೂ. ವೆಚ್ಚದಲ್ಲಿ ಆಯ್ದ 50 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣ.
- ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಹೆಚ್ಚುವರಿ 5000 ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು.
- ಅಥಣಿ, ಹುನಗುಂದ ಮತ್ತು ಮುಧೋಳಗಳಲ್ಲಿ 50 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆಗೆ ಅನುಮೋದನೆ.
- ಹೊಸದಾಗಿ ಘೋಷಣೆಯಾಗಿರುವ ತಾಲೂಕುಗಳಾದ ಹನೂರು, ಅಳ್ನಾವರ, ಅಣ್ಣಿಗೇರಿ, ಮಸ್ಕಿ, ಸಿರಿವಾರ, ಕಾಪು, ಬಬಲೇಶ್ವರ, ಕೊಲ್ಹಾರ, ಚೇಳೂರು, ತೇರದಾಳಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಣ.
- ಒಟ್ಟು 650 ಕೋಟಿ ರೂ. ವೆಚ್ಚದಲ್ಲಿ ಮಾಲೂರು, ಮಾಗಡಿ, ಕುಶಾಲನಗರ, ಕೊರಟಗೆರೆ, ಜಗಳೂರು, ಸವಣೂರು, ರಾಮದುರ್ಗ ಮತ್ತು ಸವದತ್ತಿಗಳಲ್ಲಿರುವ ತಾಲೂಕು ಮಟ್ಟದ ಆಸ್ಪತ್ರೆಗಳು, ದಾವಣೆಗೆರೆಯ ಜಿಲ್ಲಾ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗಳ ನವೀಕರಣ.
- ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಹಾಗೂ ಚಿತ್ರದುರ್ಗಗಳಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಆರಂಭ.
ಈ ನಗರಸಭೆಗಳು ಮಹಾನಗರ ಪಾಲಿಕೆಗಳಾಗಿ ಮೇಲ್ದರ್ಜೆಗೆ:
- ಮೈಸೂರು ಮತ್ತು ಕಲಬುರಗಿ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಎಂಡೊಕ್ರೈನಾಲಜಿ ಕೇಂದ್ರ ಸ್ಥಾಪನೆ.
- ಮೈಸೂರು ಮತ್ತು ಕಲಬುರಗಿ ವೈದ್ಯಕೀಯ ಕಾಲೇಜುಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಗಳ ಸ್ಥಾಪನೆ.
- ಯಲಬುರ್ಗಾ, ಜೇವರ್ಗಿ ಮತ್ತು ಯಾದಗಿರಿಯಲ್ಲಿ ತಲಾ 6 ಕೋಟಿ ರೂ. ವೆಚ್ಚದಲ್ಲಿ ಕೆಕೆಆರ್ಡಿಬಿ ಅನುದಾನದಲ್ಲಿ ನರ್ಸಿಂಗ್ ಕಾಲೇಜು ಆರಂಭ.
- ಮೈಸೂರು ಮತ್ತು ಬೆಳಗಾವಿಯಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳ ಉನ್ನತೀಕರಣಕ್ಕೆ 5 ಕೋಟಿ ರೂ.
- ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿನ 5 ಬುಡಕಟ್ಟು ಶಾಲೆಗಳು 12ನೇ ತರಗತಿಗೆ ಮೇಲ್ದರ್ಜೆಗೆ
- ದಾವಣಗೆರೆ ಮತ್ತು ಬೀದರ್ ಜಿಲ್ಲೆಗಳಲ್ಲಿನ ಕೌಶಲ್ಯ ತರಬೇಟಿ ಕೇಂದ್ರಗಳಲ್ಲಿ 1000 ಅಭ್ಯರ್ಥಿಗಳಿಗೆ ಲಂಬಾಣಿ ಜನಾಂಗದ ಕಸೂತಿ ಕಲೆಯ ತರಬೇತಿ.
- ಮಧುಗಿರಿ ಮತ್ತು ಇಂಡಿಯಲ್ಲಿ ನಬಾರ್ಡ್ ಸಹಯೋಗದೊಂದಿಗೆ ಹಾಗೂ ಕಂಪ್ಲಿ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರಿನಲ್ಲಿ ಕೆಕೆಆರ್ಡಿಬಿ ಮ್ಯಾಕ್ರೊ ಅನುದಾನದಡಿ ನೂತನ ಜಿಟಿಟಿಸಿ ಸ್ಥಾಪನೆ.
- ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲ್ಯಾಣ ಪಥ ಯೋಜನೆಯಡಿ 1000 ಕೋಟಿ ರೂ. ಮೊತ್ತದ 286 ರಸ್ತೆ ಕಾಮಗಾರಿ ಶೀಘ್ರದಲ್ಲೇ ಪೂರ್ಣ.
- ರಾಯಚೂರು, ಬೀದರ್ ಹಾಗೂ ಹಾಸನ ನಗರಸಭೆಗಳನ್ನು ಮಹಾನಗರ ಪಾಲಿಕೆಗಳಾಗಿ ಮೇಲ್ದರ್ಜೆಗೆ.
- ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ರಾಮನಗರ ಮತ್ತು ಉಲ್ಲಾಳಕ್ಕೆ 705 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ.
ಈ ನಗರಗಳಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ:
- ಅಮೃತ್ 2.0 ಯೋಜನೆಯಡಿ 233 ಕುಡಿಯುವ ನೀರು ಯೋಜನೆ ಕೈಗೆತ್ತಿಕೊಳ್ಳಲು ಯೋಜನೆ. 142 ಕೋಟಿ ರೂ. ವೆಚ್ಚದಲ್ಲಿ ಶಿಕಾರಿಪುರ, ಸಾಗರ, ಐನಾಪುರ, ಎಂ ಕೆ ಹುಬ್ಬಳ್ಳಿ, ಕುಡಚಿ, ಬೈಲಹೊಂಗಲ, ಶಹಾಪುರ ಹಾಗೂ ಶ್ರೀರಂಗ ಪಟ್ಟಣಗಳಿಗೆ ಒಳಚರಂಡಿ ಯೋಜನೆ.
- ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ವಾಟರ್ ಮೆಟ್ರೋ, ಕೋಸ್ಟಲ್ ಬರ್ತ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಕಿ ಬಂದರು, ಹೊನ್ನಾವರದಲ್ಲಿ ಹಡಗು ನಿರ್ಮಾಣ ಕ್ಷೇತ್ರ ಹಾಗೂ ನದಿ ಕ್ರೂಸ್ ಪ್ರವಾಸೋದ್ಯಮ ಯೋಜನೆಗಳಿಗೆ ವಿಸ್ತೃತ ಯೋಜನೆ ಸಿದ್ಧಪಡಿಸಲಾಗುವುದು.
- ಕಡಲ್ಕೊರೆತದ ಪರಿಣಾಮಗಳನ್ನು ಸಮಗ್ರವಾಗಿ ಎದುರಿಸಲು ಶೋರ್ ಲೈನ್ ಮ್ಯಾನೇಜಮೆಂಟ್ ಪ್ಲಾನ್ ಜಾರಿಗೊಳಿಸಲು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರತ್ಯೇಕ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುವುದು.
- ರಾಯಚೂರು ನಗರ, ಬೈಲಹೊಂಗಲ ಪಟ್ಟಣಗಳಲ್ಲಿ ವರ್ತುಲ ರಸ್ತೆಗಳನ್ನು ನಿರ್ಮಿಸಲು ವಿಸ್ತೃತ ಯೋಜನಾ ವರದಿ ತಯಾರಿಸಲಾಗುವುದು ಹಾಗೂ ವಾಗ್ದಾರಿ ರಿಬ್ಬನಪಳ್ಳಿ ರಸ್ತೆ ಅಭಿವೃದ್ಧಿಪಡಿಸಲು ಹಾಗೂ ಮದ್ದೂರು ನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ವಿಸ್ತೃತ ಯೋಜನಾ ವರದಿ ತಯಾರಿಸಲಾಗುವುದು.
- ಕೋಲಾರ ಜಿಲ್ಲೆ ನರಸಾಪುರದಲ್ಲಿ 173 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ವಸತಿ ನಿಲಯ ಹಾಗೂ ತುಮಕೂರು ಜಿಲ್ಲೆ ವಸಂತ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ವಸತಿ ನಿಲಯ ನಿರ್ಮಾಣ.
- ಕಾರ್ಕಳ, ರಾಣೆಬೆನ್ನೂರು, ರಾಯಚೂರು, ಕಡೂರು ಹಾಗೂ ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಹಾಗೂ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕಲಬುರಗಿಯಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಸ್ಥಾಪನೆ.
- ಮೈಸೂರು, ಮಂಗಳೂರು-ಉಡುಪಿ-ಮಣಿಪಾಲ್, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ ಅಭಿವೃದ್ಧಿ.
- ಕೋಲಾರ, ರಾಮನಗರ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ.
- ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಗಳಲ್ಲಿ ಕಿಯೊನಿಕ್ಸ್ ವತಿಯಿಂದ ಹೊಸ ಜಿಟಿಸಿ ಸ್ಥಾಪನೆ.
- ಸವದತ್ತಿಯ ರೇಣುಕಾ ಯಲ್ಲಮ್ಮ ಕ್ಷೇತ್ರ ಹಾಗೂ ಬೆಂಗಳೂರಿನ ದೇವಿಕಾ ರಾಣಿ ರೋರಿಚ್ ಎಸ್ಟೇಟ್ ಅನ್ನು ವಿಶೇಷ ಬಂಡವಾಳ ಯೋಜನೆಯಡಿ ಒಟ್ಟಾರೆ 199 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ.
ಮೈಸೂರು – ಬೆಳಗಾವಿಯಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ:
- ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಅಭಿವೃದ್ಧಿ ಹಾಗೂ ಹೈವೇ ಹಬ್ಸ್ ಉನ್ನತೀಕರಣ.
- ಯುನೆಸ್ಕೊ ಪಾರಂಪರಿಕ ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿರುವ ಬೇಲೂರು-ಹಳೆಬೀಡು-ಸೋಮನಾಥಪುರ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ.
- ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣಗಳ ಅಭಿವೃದ್ಧಿಗೆ ಒಟ್ಟು 6 ಕೋಟಿ ಅನುದಾನ.
- ಯಲಬುರ್ಗಾ, ಟಿ. ನರಸೀಪುರ ತಾಲೂಕು ಕ್ರೀಡಾಂಗಣಗಳ ಅಭಿವೃದ್ಧಿಗೆ 6 ಕೋಟಿ ರೂ. ಅನುದಾನ.
- ಮೈಸೂರು ಮತ್ತು ಬೆಳಗಾವಿಗಳಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರ
- ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭೂಕುಸಿತ ತಡೆಗೆ 200 ಕೋಟಿ ವೆಚ್ಚ
- ಕರಾವಳಿ ಜಿಲ್ಲೆಗಳಲ್ಲಿ ಸಮುದ್ರ ಕೊರೆತ ತಗ್ಗಿಸಲು 200 ಕೋಟಿ.
- ನಂದಿ ಬೆಟ್ಟದ ಬಳಿ ಕೂಡಗುರಕಿ ಮತ್ತು ಕೆಜಿಎಫ್ ಬಳಿ 2 ಭಾರತೀಯ ಮೀಸಲು ಪೊಲೀಸ್ ಪಡೆ ಸ್ಥಾಪಿಸಲು 80 ಕೋಟಿ ರೂ. ಅನುದಾನ.
- ಬಳ್ಳಾರಿ, ದಾವಣಗೆರೆ, ಮೈಸೂರು ಮತ್ತು ಬೆಂಗಳೂರು ಕೇಂದ್ರ ವಲಯಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಾಪನೆ.
- ದಾವಣಗೆರೆ, ಧಾರವಾಡ, ಕಲಬುರಗಿ, ಬೆಳಗಾವಿ, ಚಿತ್ರದುರ್ಗ, ಹಾವೇರಿ, ಹೊಸಪೇಟೆ, ಬಳ್ಳಾರಿ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಗಳ ಒಟ್ಟು 60 ಸ್ಥಳಗಳಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಎಐ ಆಧರಿತ ಟ್ರಾಫಿಕ್ ಕ್ಯಾಮೆರಾ ಅಳವಡಿಕೆ.
Laxmi News 24×7