ರಾಯಚೂರು : ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ರಹಸ್ಯ ಸಭೆ ಏನೂ ಇರಲಿಲ್ಲ. ಎಲ್ಲರೂ ಕೂಡಿಯೇ ಸಭೆ ಮಾಡಿದ್ದು. ರಹಸ್ಯ ಸಭೆ ಎನ್ನುವ ಪ್ರಶ್ನೆಯೇ ಇಲ್ಲ. ಅದು ಊಟದ ಸಭೆ ಅಷ್ಟೇ.
ಸಭೆಯಲ್ಲಿ ಅಂತಾ ಚರ್ಚೆ ಯಾವುದೂ ಆಗಿಲ್ಲ. ಸಂಪುಟ ವಿಸ್ತರಣೆಯೂ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಸಿಎಂ ಬದಲಾವಣೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಇದ್ದಾರೆ, ಅಂತಹ ಅವಶ್ಯಕತೆ ಬರಲ್ಲ. ಈ ಅವಧಿಗೆ ಸಿಎಂ ಆಗುವುದು ಬರಲ್ಲ. ಮುಂದಿನ ಅವಧಿಗೆ ನಾನು ಸಿಎಂ ಅಂತ ಹೇಳಿದ್ದೇನೆ, ಕಾದು ನೋಡಬೇಕು ಎಂದರು.
ಗುತ್ತಿಗೆದಾರರ ಬಿಲ್ಗೆ ಹಣ ಬಿಡುಗಡೆ ಆಗದ ವಿಚಾರಕ್ಕೆ ಮಾತನಾಡಿದ ಅವರು, ಈ ರೀತಿಯ ಇನ್ ಬ್ಯಾಲೆನ್ಸ್ ಆಗಲು ಏನ್ ಕಾರಣ. 1000 ಕೋಟಿ ಬಜೆಟ್ ಇದೆ. ಸಾವಿರ ಕೋಟಿ ಕೆಲಸ ಆಗಿದ್ರೆ ಅದು ಬಿಡುಗಡೆ ಮಾಡಬೇಕು. 1000 ಕೋಟಿ ಬಜೆಟ್ ಇಟ್ಟುಕೊಂಡು 3 ಸಾವಿರ ಕೋಟಿ ಕೆಲಸ ಮಾಡಿದ್ರೆ ಹೇಗೆ ಆಗುತ್ತೆ. ಫೈನಾನ್ಸ್ ಸಪೋರ್ಟ್ ಇಲ್ಲದೇ ಕೆಲಸ ಮಾಡಿದ್ದಾರೆ. ಹೀಗಾಗಿ ಬಿಲ್ಗಳು ಕೊಡಲು ಲೇಟ್ ಆಗುತ್ತಿದೆ. ನಮ್ಮ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು