ಹುಬ್ಬಳ್ಳಿ: ಗರ್ಭಿಣಿ ಪತ್ನಿ ಮೃತಪಟ್ಟ ವಿಷಯ ತಿಳಿದ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ರಾಧಿಕಾ(19) ಮೃತಪಟ್ಟಿರುವ ಗರ್ಭಿಣಿ. ಈಕೆಯ ಪತಿ ಮಲ್ಲೇಶ್(25) ಆತ್ಮಹತ್ಯೆಗೆ ಯತ್ನಿಸಿದವರು. ಮಲ್ಲೇಶ್ಗೆ ಕಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಎಂಟೂವರೆ ತಿಂಗಳ ಗರ್ಭಿಣಿಯಾಗಿದ್ದ ರಾಧಿಕಾಗೆ 6 ಬಾರಿ ಫಿಟ್ಸ್ ಬಂದಿತ್ತು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಟ್ಟೆಯಲ್ಲೇ 8 ತಿಂಗಳ ಭ್ರೂಣ ಸಾವನ್ನಪ್ಪಿದ್ದ ಕಾರಣ ರಾಧಿಕಾ ಆರೋಗ್ಯದಲ್ಲಿ ತೀವ್ರವಾಗಿ ಏರುಪೇರು ಉಂಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಕಿಮ್ಸ್ ಆಸ್ಪತ್ರೆ ನಿರ್ದೇಶಕ ಎಸ್.ಎಫ್.ಕಮ್ಮಾರ ಪ್ರತಿಕ್ರಿಯಿಸಿ, “ಬೆಳಗಾವಿಯಿಂದ ಕಿಮ್ಸ್ ಆಸ್ಪತ್ರೆಗೆ ಬಂದಾಗ ಗರ್ಭಿಣಿ ರಾಧಿಕಾ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಬಿಪಿ, ನಾಡಿಮಿಡಿತ ಇರಲಿಲ್ಲ. ರಾಧಿಕಾ ಅವರಿಗೆ ಪ್ರಜ್ಞೆಯೇ ಇರಲಿಲ್ಲ. ಹೊಟ್ಟೆಯಲ್ಲಿ ಮಗು ಇತ್ತು. ಗರ್ಭಪಾತ ಆಗಿರಲಿಲ್ಲ. ಆದರೆ ನಮ್ಮ ವೈದ್ಯರು ಸಕಾಲದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ” ಎಂದರು.