ಉತ್ತರ ಕನ್ನಡ, ಡಿಸೆಂಬರ್ 22: ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಮಾತಿದೆ. ಕಡಲ ತೀರದ ಅಸುರಕ್ಷತೆ ಬಗ್ಗೆ ಮಾಧ್ಯಮದವರು ಎಷ್ಟೇ ಸುದ್ದಿ ಮಾಡಿದರೂ ಜಿಲ್ಲಾಡಳಿತ ಎಚ್ಚೆತ್ಕೊಂಡಿರಲಿಲ್ಲ. ಇತ್ತೀಚೆಗೆ ಕೊಲಾರ ಜಿಲ್ಲೆಯ ಅಮಾಯಕ ನಾಲ್ವರು ವಿದ್ಯಾರ್ಥಿನಿಯರು ಸಾವನಪ್ಪಿದಾಗ, ಜಿಲ್ಲಾ ಮಂತ್ರಿ ಸೇರಿದಂತೆ ಎಲ್ಲರನ್ನೂ ಕೋಲಾರ ಶಾಸಕ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಬಳಿಕ ಎಚ್ಚೆತ್ತುಕೊಂಡಿರುವ ಉತ್ತರ ಕನ್ನಡ ಜಿಲ್ಲಾಡಳಿತ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.
ವಿದ್ಯಾರ್ಥಿನಿಯರ ಸಾವಿನ ಬಳಿಕ ಎಚ್ಚೆತ್ತ ಜಿಲ್ಲಾಡಳಿತ
ಎಲ್ಲಾ ವರ್ಗದ ಪ್ರವಾಸಿಗರಿಗೆ ನೆಚ್ಚಿನ ಜಿಲ್ಲೆ ಅಂದ್ರೆ ಅದು ಉತ್ತರ ಕನ್ನಡ. ಹಚ್ಚಹಸಿರು ಕಾಡು ಮತ್ತು ಕಾಡು ಪ್ರಾಣಿಗಳು ಹೀಗೆ ಪ್ರವಾಸಿಗರು ಬಯಸಿದ ಬಹುತೇಕ ತಾಣ ಸಿಗುವ ರಾಜ್ಯದ ಏಕೈಕ ಜಿಲ್ಲೆ ಅಂದ್ರೆ ಅದು ಉತ್ತರ ಕನ್ನಡ. ದೇಶ ವಿದೇಶಿಗರನ್ನ ಸೆಳೆಯುವ ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೆ ಇದೆ. ಹೀಗಾಗಿ ಪ್ರವಾಸಿಗರ ಸಂಖ್ಯೆಗೆ ಅನಗುಣವಾಗಿ ಸುರಕ್ಷತೆಯ ಬಗ್ಗೆ ಕ್ರಮಕೈಗೊಳ್ಳಬೇಕಿದ್ದ ಜಿಲ್ಲಾಡಳಿತ ಇಷ್ಟು ದಿನ ಕೈಕಟ್ಟಿ ಕುಳಿತಿತ್ತು. ಆದರೆ ಡಿಸೆಂಬರ್ 11 ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತುರು ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಮುರುಡೇಶ್ವರ ಕಡಲ ತೀರದಲ್ಲಿ ಕೊಚ್ಚಿ ಹೋಗಿ ಸಾವನಪ್ಪಿದ ಬೆನ್ನಲ್ಲೇ ಮುರುಡೇಶ್ವರ ಕಡಲ ತೀರಕ್ಕೆ ಸಾರ್ವಜನಿಕರನ್ನ ಸಂಪೂರ್ಣ ನಿರ್ಬಂಧ ಹೇರಲಾಗಿದೆ.