ಬೆಳಗಾವಿ: “ಬಿಜೆಪಿ ಮತ್ತು ಅವರ ನಾಯಕರಿಗೆ ಮಾನ, ಮರ್ಯಾದೆ ಇಲ್ಲ. ಬಿಜೆಪಿಯಿಂದ ಇಡೀ ದೇಶಕ್ಕೆ ಅವಮಾನ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ ವಾಗ್ದಾಳಿ ನಡೆಸಿದರು.
ಸುವರ್ಣ ವಿಧಾನಸೌಧದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಅವರು ಕಟುವಾದ ಪದಗಳಲ್ಲಿ ಟೀಕಿಸಿದರು.
“ಬಿಜೆಪಿ ನಾಯಕರು ಸದನದಲ್ಲಿ ನಡೆದುಕೊಂಡ ರೀತಿಗೆ ನಾಚಿಕೆಯಾಗಬೇಕು. ಯಾವಾಗಲೂ ಧರ್ಮ, ಸಂಸ್ಕೃತಿ ಬಗ್ಗೆ ಮಾತನಾಡುವ ಅವರು ಭಾರತ ಮಾತೆಗೆ, ಮಾತೃಭೂಮಿಗೆ ಅಪಮಾನ ಮಾಡಿದ್ದಾರೆ. ಶಾಸಕ ಮುನಿರತ್ನ ವಿಚಾರದಲ್ಲಿಯೂ ಬಿಜೆಪಿ ಹೀಗೇ ವರ್ತಿಸಿತು” ಎಂದರು.
ಸರ್ಕಾರ ಸಿ.ಟಿ.ರವಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ, “ಕಾನೂನೇ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ, ಸರ್ಕಾರವಲ್ಲ” ಎಂದು ಹೇಳಿದರು.
ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, “ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಪ್ರಕರಣದಲ್ಲಿ ಸಿ.ಟಿ.ರವಿ ಬಂಧನ ವಿಷಯವನ್ನು ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯ ನೋಡಿಕೊಳ್ಳುತ್ತದೆ” ಎಂದರು.