ನಾಡಿನ ಮಠಾಧೀಶರು, ರಾಜಕಾರಣಿಗಳು, ಬುದ್ದಿಜೀವಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳನ್ನು ಇದುವರೆಗೆ ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದ ಯತ್ನಾಳ ಅವರು ಇದೀಗ ಮಹಾನ್ ಸಮಾಜಸುಧಾರಕ ವಿಶ್ವಗುರು ಬಸವಣ್ಣನವರನ್ನು ಬಿಡದೇ ಅಪಮಾನ ಮಾಡಿರುವುದು ಬಸವ ಜನ್ಮಭೂಮಿಗೆ ಮಾಡಿದ ಅವಮಾನವಾಗಿದೆ’ ಎಂದು ಅಹಿಂದ ಮುಖಂಡ ಎಂ.ಸಿ.ಮುಲ್ಲಾ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಬಸವಣ್ಣನವರ ಅನುಯಾಯಿಗಳಿಗೆ ಯತ್ನಾಳ ಹೇಳಿಕೆಯಿಂದ ತೀವ್ರ ನೋವುಂಟಾಗಿದೆ. ಅವರು ಬೇಷರತ್ತಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ’ ಎಂದರು. `ಯತ್ನಾಳ ಅವರು ಇದುವರೆಗೆ ತಮ್ಮ ರಾಜಕೀಯಕ ಮೈಲೇಜಿಗಾಗಿ ಹಿಂದು-ಮುಸ್ಲಿಂ ಕೋಮು ವಿಷಯ ಮಾತನಾಡಿ, ಅರೆಬರೆ ತಲೆಕೆಟ್ಟಿರುವರಂತೆ ವರ್ತಿಸುತ್ತಿದ್ದರು. ಆದರೆ, ಈಗ ಪೂರ್ಣ ತಲೆ ಕೆಟ್ಟವರಂತೆ ವರ್ತಿಸುತ್ತಿದ್ದಾರೆ. ಅವರಿಗೆ ಸರ್ಕಾರದ ಖರ್ಚಿನಲ್ಲಾದರೂ ಸೂಕ್ತ ಚಿಕಿತ್ಸೆ ಕೊಡಿಸುವ ಅಗತ್ಯ ಇದೆ. ಇಲ್ಲವಾದರೆ ವಿಜಯಪುರದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನಾವೇ ಚಿಕಿತ್ಸೆ ಕೊಡಿಸುತ್ತೇವೆ’ ಎಂದು ಹೇಳಿದರು. “ಯತ್ನಾಳ ಹೇಳಿಕೆಗಳಿಂದ ವಿಜಯಪುರ ಜಿಲ್ಲೆಗೆ ನಾಡಿನೆಲ್ಲೆಡೆ ಕೆಟ್ಟ ಹೆಸರು ಬರತೊಡಗಿದೆ. ಹೊರಗಡೆ ಹೋದಾಗ ವಿಜಯಪುರದವರು ಎಂದು ಹೇಳಿಕೊಳ್ಳಲು ನಾಚಿಕೆ ಪಡುವಂತಾಗಿದೆ’ ಎಂದರು.