ನವಜಾತ ಶಿಶುವನ್ನು ಟಾಯ್ಲೆಟ್ಗೆ ಹಾಕಿ ಫ್ಲಶ್,
ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಆಸ್ಪತ್ರೆಯೊಂದರಲ್ಲಿ ಇಡೀ ಮಾನವ ಕುಲವೇ ತಲೆತಗ್ಗಿಸುವಂಥ ಆಘಾತಕಾರಿ ಮತ್ತು ಅಮಾನವೀಯ ಘಟನೆಯೊಂದು ನಡೆದಿರುವುದು ತಿಳಿದುಬಂದಿದೆ. ನವಜಾತ ಶಿಶುವೊಂದನ್ನು ಟಾಯ್ಲೆಟ್ಗೆ ಹಾಕಿ ಫ್ಲಶ್ ಮಾಡಿದ ವಿದ್ಯಮಾನ ಬೆಳಕಿಗೆ ಬಂದಿದ್ದು, ಘಟನೆ ಸಂಬಂಧ ಇದೀಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ರಾಮನಗರ, ನವೆಂಬರ್ 28: ಮಾನವ ಕುಲವೇ ಬೆಚ್ಚಿಬೀಳುವಂಥ ಆಘಾತಕಾರಿ ಕೃತ್ಯವೊಂದು ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಆಗತಾನೆ ಜನಿಸಿರುವ ಶಿಶುವೊಂದನ್ನು ಶೌಚಾಲಯದ ಗುಂಡಿಗೆ ಹಾಕಿ ಫ್ಲಶ್ ಮಾಡಲಾಗಿದೆ. ಬುಧವಾರ ರಾತ್ರಿ ನಡೆದ ಈ ಅಮಾನವೀಯ ವಿದ್ಯಮಾನ ಇಂದು ಬೆಳಕಿಗೆ ಬಂದಿದ್ದು, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾರೋಹಳ್ಳಿಯ ಆಸ್ಪತ್ರೆಯಲ್ಲಿ ನಡೆದಿದ್ದೇನು?
ಬುಧವಾರ ರಾತ್ರಿ 10:30 ರ ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಆಸ್ಪತ್ರೆಯ ನೆಲಮಹಡಿಯ ಟಾಯ್ಲೆಟ್ಗೆ ತೆರಳಿದ್ದ ವೈದ್ಯಕೀಯ ಸಿಬ್ಬಂದಿಗೆ ಮಹಿಳೆಯರ ಟಾಯ್ಲೆಟ್ನಲ್ಲಿ ನೀರು ನಿಂತಿರುವುದು ಗಮನಕ್ಕೆ ಬಂದಿದೆ. ನೀರು ಫ್ಲಶ್ ಆಗದ ಕಾರಣ ವೈದ್ಯಕೀಯ ಸಿಬ್ಬಂದಿ ಟಾಯ್ಲೆಟ್ ಅನ್ನು ಸ್ವಚ್ಛಗೊಳಿಸಲು ಸಿಬ್ಬಂದಿಗೆ ಸೂಚನೆ ನೀಡಿದ್ದರು. ಅದರಂತೆ, ಸಿಬ್ಬಂದಿ ವ್ಯಾಕ್ಯೂಮ್‌ನಿಂದ ಕ್ಲೀನ್ ಮಾಡಿದ್ದಾರೆ. ಆಗ, ಏನೋ ವಸ್ತು ಅಡ್ಡ ಇರುವುದು ಪತ್ತೆಯಾಗಿದೆ. ಆರಂಭದಲ್ಲಿ, ಬಟ್ಟೆ ಅಥವಾ ಏನಾದರು ಕೊಳೆ ಇರಬಹುದು ಎಂದು ಅವರು ಶಂಕಿಸಿದ್ದಾರೆ.
ಟಾಯ್ಲೆಟ್ ಗುಂಡಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು ಶಿಶುವಿನ ದೇಹ!
ಟಾಯ್ಲೆಟ್ ಶುಚಿಗೊಳಿಸುವ, ಬ್ಲಾಕ್ ನಿರ್ಮೂಲನೆಗೊಳಿಸುವ ಪರಿಕರವನ್ನು ಬಳಸಿ ಒಳಗೆ ಸಿಕ್ಕಿಹಾಕಿಕೊಂಡಿದ್ದ ವಸ್ತುವನ್ನು ಹೊರ ತೆಗೆದಾಗ ಸಿಬ್ಬಂದಿ ಆಘಾತಕ್ಕೊಳಗಾಗಿದ್ದರು. ನವಜಾತ ಶಿಶುವಿನ ದೇಹ ಅವರಿಗೆ ಸಿಕ್ಕಿದೆ. ಶಿಶು ಜನಿಸಿ ಒಂದೆರಡು ದಿನ ಆಗಿರಬಹುದು ಎಂದು ಅಂದಾಜಿಸಲಾಗಿದೆ.