ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದ ಮಾದರಿಯಲ್ಲಿ ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಮಾಡಬೇಕೆಂದು ಕನಸು ಕಂಡಿರುವೆ. ಇದಕ್ಕೆ ಕ್ಷೇತ್ರದ ಜನರ ಸಹಕಾರ ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಹಿಂಡಲಗಾ ಗ್ರಾಮದ ರಕ್ಷಕ್ ಕಾಲೋನಿಯ ಚರಂಡಿ ನಿರ್ಮಾಣದ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿದ ಸಚಿವರು, ಕ್ಷೇತ್ರದ ಯಾವುದೇ ಭಾಗಕ್ಕೆ ಹೋದರೂ ಯಾವುದೇ ಸಣ್ಣಪುಟ್ಟ ಕೆಲಸಗಳಿದ್ದರೂ ಕೂಡ ಜನರು ನನ್ನ ಬಳಿ ಹೇಳಿಕೊಳ್ಳುತ್ತಾರೆ. ರಸ್ತೆ ಇರಲಿ, ಚರಂಡಿ ಕೆಲಸವೇ ಇರಲಿ, ಒಬ್ಬ ಗ್ರಾಮ ಪಂಚಾಯಿತಿ ಸದಸ್ಯ ಮಾಡಬಹುದಾದ ಕೆಲಸಗಳನ್ನು ಕೂಡ ವಿಶ್ವಾಸದಿಂದ ನನ್ನ ಬಳಿ ಹೇಳಿಕೊಳ್ಳುತ್ತಾರೆ. ನಾನು ಕೂಡ ಅಷ್ಟೇ ಪ್ರೀತಿಯಿಂದ ಹೇಳಿದ ಕೆಲಸಗಳನ್ನು ಮಾಡಿ ಕೊಡುತ್ತಿದ್ದೇನೆ ಎಂದರು.
ನನ್ನ ಬಳಿ ಹೇಳಿಕೊಂಡರೆ ಪರಿಹಾರ ಸಿಗುತ್ತದೆ ಎನ್ನುವ ಕಾರಣದಿಂದ ಜನರು ತಮ್ಮ ಸಮಸ್ಯೆಗಳನ್ನು ಯಾವುದೇ ಸಂಕೋಚವಿಲ್ಲದೆ ಹೇಳಿಕೊಳ್ಳುತ್ತಾರೆ. ನನ್ನ ಮೇಲಿನ ಪ್ರೀತಿ, ವಿಶ್ವಾಸಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ ಎಂದು ಪ್ರಶ್ನಿಸಿದ ಸಚಿವರು, ನಾನು ಯಾವುದೇ ಪಕ್ಷ ಭೇದವಿಲ್ಲದೆ, ಎಲ್ಲ ಕೆಲಸಗಳನ್ನು ಮಾಡಿಕೊಡುತ್ತಿದ್ದೇನೆ ಎಂದು ಹೇಳಿದರು.