ಬೆಳಗಾವಿ: ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಆರೋಪದಡಿ ತಾಯಿ-ಮಗಳನ್ನು ರಸ್ತೆಗೆ ಎಳೆದು ತಂದು ಬಟ್ಟೆ ಹರಿದು ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ನಗರದ ವಡ್ಡರವಾಡಿ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಹರಿದಾಡಿದ ಅನಂತರ ಘಟನೆ ಬೆಳಕಿಗೆ ಬಂದಿದ್ದು, ಇಂದ್ರಾ ಅಷ್ಟೇಕರ, ಹೂವಪ್ಪ ಅಷ್ಟೇಕರ ಹಾಗೂ ಮಣಿಕಂಠ ಅಷ್ಟೇಕರ ಅವರ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಡ್ಡರವಾಡಿಯ ಮಹಿಳೆಯೊಬ್ಬಳನ್ನು ಮಹಾರಾಷ್ಟ್ರದ ಹುಡುಗನಿಗೆ ಮದುವೆ ಮಾಡಿಕೊಡಲಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡನ ಮನೆಯಲ್ಲಿ ಕಿರುಕುಳ ನೀಡುತ್ತಿದ್ದಾರೆಂಬ ಕಾರಣದಿಂದ ಆಕೆ ತವರಿಗೆ ಬಂದು ತನ್ನ ತಾಯಿಯ ಜತೆಗೆ ವಾಸಿಸುತ್ತಿದ್ದಳು. ಆಗ ಅವರ ಪರಿಚಯಸ್ಥರು ಪದೇ ಪದೆ ಮನೆಗೆ ಬಂದು ಹೋಗುತ್ತಿದ್ದರು. ಅದನ್ನು ಕಂಡ ನೆರೆ ಮನೆಯವರು ತಾವು ವೇಶ್ಯಾವಾಟಿಕೆ ನಡೆಸುತ್ತಿದ್ದೇವೆಂಬ ಅನುಮಾನದಿಂದ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.