ಪುತ್ತೂರು: ತನ್ನ ಪತಿ ಕೆಲಸಕ್ಕೆ ತೆರಳಲು ಅನುಕೂಲವಾಗಲೆಂದು ಪತ್ನಿಯು ಗೃಹಲಕ್ಷ್ಮಿ ಯೋಜನೆಯ ಮೂಲಕ ತಿಂಗಳು ತಿಂಗಳು ದೊರೆಯುವ ಹಣದಿಂದ ಸ್ಕೂಟರ್ ಖರೀದಿಸಿ ನೆರವಾಗಿದ್ದಾರೆ.
ಕೋಡಿಂಬಾಡಿ ಸಮೀಪದ ಶಾಂತಿನಗರ ನಿವಾಸಿ ಮಿಸ್ರಿಯಾ ತನ್ನ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮಿ ಹಣದಿಂದ ಪೈಂಟರ್ ಕೆಲಸಕ್ಕೆ ತೆರಳುತ್ತಿರುವ ತನ್ನ ಪತಿ ಸಲೀಂಗೆ ಅನುಕೂಲವಾಗಲೆಂದು ಸ್ಕೂಟರ್ ಅನ್ನು ಖರೀದಿ ಮಾಡಿದ್ದಾರೆ.
ಸಲೀಂ ಅವರು ನಿತ್ಯ ದೂರದ ಊರುಗಳಿಗೆ ಪೈಂಟಿಂಗ್ ಕೆಲಸಕ್ಕೆ ಹೋಗುತ್ತಾರೆ. ಅವರಿಗೆ ವಾಹನ ಆವಶ್ಯವಿರುವ ಕಾರಣ ಮಿಸ್ರಿಯಾ ಅವರು ಸರಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಬಂದಿದ್ದ ಹಣದಲ್ಲಿ ಕೂಡಿಟ್ಟು 20 ಸಾವಿರ ರೂ. ನಗದನ್ನು ಪತಿಗೆ ನೀಡಿದ್ದಾರೆ.
ಈ ಹಣವನ್ನು ಮುಂಗಡವಾಗಿ ಪಾವತಿಸಿ ಉಳಿದ ಹಣಕ್ಕೆ ಲೋನ್ ಮಾಡಿ ಸ್ಕೂಟರ್ ಖರೀದಿಸಿದ್ದಾರೆ. ಇನ್ನೂ ಪ್ರತಿ ತಿಂಗಳ ಕಂತು ಪಾವತಿಗೂ ಪತ್ನಿ ತನ್ನ ಗೃಹಲಕ್ಷ್ಮಿ ಯೋಜನೆಯಿಂದ ಬರುವ ಹಣ ಬಳಸಲು ನಿರ್ಧರಿಸಿದ್ದಾರೆ.
ಶಾಸಕರಿಂದ ಗೌರವಾರ್ಪಣೆ
ಸಲೀಂ ಅವರು ತನ್ನ ಪತ್ನಿ ನೀಡಿದ ಸ್ಕೂಟರ್‌ನೊಂದಿಗೆ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿಯಾಗಿ ಸರಕಾರದ ಗೃಹಲಕ್ಷ್ಮಿ ಹಣದಿಂದ ತನ್ನ ಬಾಳು ಬೆಳಗಿದೆ ಎಂದು ಹೇಳಿದ್ದಾರೆ. ತನಗೆ ಕೆಲಸಕ್ಕೆ ತೆರಳಲು ಈ ವಾಹನ ನೆರವಾಗಲಿದೆ ಎಂದಿದ್ದಾರೆ. ಶಾಸಕರು ಸಲೀಂ ಅವರನ್ನು ಗೌರವಿಸಿದರು.
ಆರ್ಥಿಕ ನೆರವು ಗೃಹಲಕ್ಷ್ಮಿ
ತನ್ನ ಸ್ಕೂಟರಲ್ಲಿ ಸಲೀಂ ಅವರು ಆರ್ಥಿಕ ನೆರವು ಗೃಹಲಕ್ಷ್ಮಿ ಎಂಬ ಫಲಕ ಹಾಕಿದ್ದು ಇದರಲ್ಲಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಲಕ್ಷ್ಮೀ ಹೆಬ್ಟಾಳ್ಕರ್ ಹಾಗೂ ಶಾಸಕ ಅಶೋಕ್ ರೈ ಅವರ ಭಾವಚಿತ್ರವನ್ನು ಬಳಸಿದ್ದಾರೆ.