ಕಿನ್ನಿಗೋಳಿ: ಆರ್ಥಿಕ ಮುಗ್ಗಟ್ಟು ಮತ್ತು ಶೋಕಿ ಜೀವನವೇ ಪಕ್ಷಿಕೆರೆಯ ಕಾರ್ತಿಕ್ ಭಟ್ ಕುಟುಂಬದ ಅಂತ್ಯಕ್ಕೆ ಕಾರಣವಾಯಿತೇ ಎಂಬ ಸಂಶಯ ಬಲಗೊಳ್ಳುತ್ತಿದೆ. ಕಳೆದ ಸುಮಾರು ಸಮಯದಿಂದ ಕೆಲಸ ಇಲ್ಲದಿದ್ದರೂ ಶೋಕಿ ಜೀವನದಲ್ಲಿಯೇ ಕಾಲ ಕಳೆಯುತ್ತಿದ್ದ ಕಾರ್ತಿಕ್ ಭಟ್ (32) ಆರ್ಥಿಕ ಸಮಸ್ಯೆಯಿಂದ ಮೇಲೆ ಬರಲಾರದೆ ಪತ್ನಿ ಪ್ರಿಯಾಂಕಾ (28) ಮತ್ತು ಪುಟ್ಟ ಮಗ ಹೃದಯ್ (4) ನನ್ನು ನಿರ್ದಯವಾಗಿ ಕೊಲೆ ಮಾಡಿ ಬಳಿಕ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತೆ ಇಡೀ ಪ್ರಕರಣ ಭಾಸವಾಗುತ್ತಿದೆ.
ಕಾರ್ತಿಕ್ ಶುಕ್ರವಾರವೇ ಆತ್ಮಹತ್ಯೆ ಮಾಡಿಕೊಂಡಿದ್ದರೂ ಇಡೀ ಪ್ರಕರಣ ಬೆಳಕಿಗೆ ಬಂದದ್ದು ಶನಿವಾರ ಅಪರಾಹ್ನದ ವೇಳೆಗೆ. ರವಿವಾರ ಬೆಳಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಎಲ್ಲ ಮೂವರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ನೇರವಾಗಿ ಕೆರೆಕಾಡಿನ ರುದ್ರಭೂಮಿಗೆ ಕೊಂಡೊಯ್ದು ಜತೆಯಾಗಿ ಅಂತ್ಯಕ್ರಿಯೆ ನಡೆಸಲಾಯಿತು. ಅಂತ್ಯಕ್ರಿಯೆಯನ್ನು ಪತ್ನಿಯ ಮನೆಯವರು ನಡೆಸಲಿ ಎಂದು ಕಾರ್ತಿಕ್ ಡೈರಿಯಲ್ಲಿ ಬರೆದಿದ್ದರಿಂದ ರವಿವಾರ ಎರಡೂ ಕುಟುಂಬದವರು ಮಾತನಾಡಿಕೊಂಡು ಇಲ್ಲಿಯೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದು, ಅದರಂತೆ ನಡೆಯಿತು.
ಗೆಳೆಯರಲ್ಲಿ ಸಾಲ ಮಾಡಿದ್ದ
ಪಕ್ಷಿಕೆರೆಯಲ್ಲಿ ತನ್ನ ಸಂಬಂಧಿಯ ಮಾಲಕತ್ವದ ಫ್ಲ್ಯಾಟ್‌ನಲ್ಲಿ ಕಾರ್ತಿಕ್ ಮತ್ತು ಕುಟುಂಬ ತಂದೆ-ತಾಯಿಯ ಜತೆ ವಾಸಿಸುತ್ತಿದ್ದರು. ವಯೋವೃದ್ಧ ತಂದೆ-ತಾಯಿ ಪಕ್ಷಿಕೆರೆಯಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದರು. ಒಂದೇ ಮನೆಯಲ್ಲಿದ್ದರೂ ಅವರಲ್ಲಿ ಅನ್ಯೋನ್ಯತೆ ಇರಲಿಲ್ಲ. ಕಾರ್ತಿಕ್ ಕುಟುಂಬ ಪ್ರತ್ಯೇಕವಾಗಿ ಒಂದು ಕೋಣೆಯಲ್ಲಿ ಇದ್ದು, ತಂದೆ-ತಾಯಿಯ ಜತೆ ಬೆರೆಯುತ್ತಿರಲಿಲ್ಲ. ಕಳೆದ 2-3 ವರ್ಷಗಳಿಂದ ಇದೇ ರೀತಿಯಲ್ಲಿದ್ದು, ಊಟ-ತಿಂಡಿ ಎಲ್ಲವೂ ಹೊರಗೆ ಹೋಗಿ ಹೊಟೇಲ್‌ನಲ್ಲಿಯೇ ನಡೆಯುತಿತ್ತು. ಬೆಳಗ್ಗೆ ಅಪ್ಪ-ಅಮ್ಮ ಎದ್ದು ಕ್ಯಾಂಟೀನ್‌ಗೆ ಹೋಗುವ ವೇಳೆ ಚಹಾ ಮಾಡಿಟ್ಟು ಹೋಗುತ್ತಿದ್ದು ಅದನ್ನು ಸೇವಿಸುತ್ತಿದ್ದರು. ಅನಂತರ ತಿಂಡಿ, ಊಟ ಎಲ್ಲವೂ ಹೊರಗೆ ಮಾಡುತ್ತಿದ್ದರು.
ಹಿಂದೆ ಮಂಗಳೂರಿನ ಸೊಸೈಟಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಕೆಲವು ಸಮಯದಿಂದ ಕೆಲಸಕ್ಕೂ ಹೋಗುತ್ತಿರಲಿಲ್ಲ. ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿದ್ದರೂ ಶೋಕಿ ಜೀವನ ಬಯಸುತ್ತಿದ್ದ. ಇದಕ್ಕಾಗಿ ಹಲವು ಮಂದಿ ಗೆಳೆಯರಲ್ಲಿ ಸಾಲ ಕೂಡ ಮಾಡಿದ್ದ ಎಂದು ತಿಳಿದುಬಂದಿದೆ. ಆತನ ರೂಮಿಗೆ ಎಸಿ ಅಳವಡಿಸಿದ್ದು, ಮನೆಯ ವಿದ್ಯುತ್ ಬಿಲ್ ಅನ್ನು ತಂದೆಯೇ ಪಾವತಿಸುತ್ತಿದ್ದರು.
ಕಾರ್ತಿಕ್ ಬಾಲ್ಯದಿಂದಲೂ ಉತ್ತಮ ಗುಣನಡತೆಯವನಾಗಿದ್ದ. ಆದರೆ ಮದುವೆ ಅನಂತರ ಬದಲಾಗಿದ್ದಾನೆ ಎನ್ನಲಾಗುತ್ತಿದೆ. ನೆರೆಕರೆಯವರು ಹೇಳುವ ಪ್ರಕಾರ ಸರಿಯಾದ ಕೆಲಸವಿಲ್ಲದ ಕಾರ್ತಿಕ್, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ. ಅಲ್ಲದೆ ತನ್ನ ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ಆನ್‌ಲೈನ್ ಆಟದಲ್ಲಿ ನಿರತನಾಗಿ ಅಲ್ಲೂ ಸಾಕಷ್ಟು ಹಣ ಕಳೆದುಕೊಂಡಿದ್ದ ಎಂದು ಹೇಳಲಾಗುತ್ತಿದೆ.
ಮಗನನ್ನು ಸ್ವತಃ ಶಾಲೆಗೆ ಕರೆದೊಯ್ಯುತ್ತಿದ್ದ
ಕಾರ್ತಿಕ್ ತನ್ನ ಮಗನನ್ನು ಸುರತ್ಕಲ್‌ನ ಶಾಲೆಗೆ ಸೇರಿಸಿದ್ದ ಪ್ರತೀ ದಿನ ಬೆಳಗ್ಗೆ ತಾನೇ ಮಗನನ್ನು ಶಾಲೆಗೆ ಕರೆದೊಯ್ಯುತ್ತಿದ್ದ. ಮಧ್ಯಾಹ್ನ ವಾಪಸ್ ಕರೆದುಕೊಂಡು ಬಂದು ಅನಂತರ ಪತ್ನಿ ಜತೆ ಹೊಟೇಲ್‌ಗೆ ಹೋಗಿ ಊಟ ಮಾಡಿ ಬರುತ್ತಿದ್ದರು. ಇಷ್ಟೊಂದು ಪ್ರೀತಿ ತೋರುತ್ತಿದ್ದ ಮಗನನ್ನು ನಿರ್ದಯವಾಗಿ ಕೊಲ್ಲುವ ಮನಃಸ್ಥಿತಿ ಹೇಗೆ ಬಂತು ಎಂಬುದೇ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.
ಪತ್ನಿ ಜತೆ ಜಗಳ ಇಲ್ಲ
ಪ್ರಿಯಾಂಕಾ ಅವರ ತಾಯಿ ಸಾವಿತ್ರಿ ಮಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಅಳಿಯ ಕಾರ್ತಿಕ್‌ಗೆ ವಿದೇಶಕ್ಕೆ ಹೋಗುವಂತೆ ಅವರ ತಾಯಿ ತುಂಬಾ ಒತ್ತಾಯ ಮಾಡುತ್ತಲಿದ್ದರು. ನನ್ನ ಮಗಳು ಕೆಲಸಕ್ಕೆ ಹೋಗಲಿ ಎಂದು ಅವಳ ಅತ್ತೆ ಹೇಳುತ್ತಿದ್ದರು. ಕಾರ್ತಿಕ್ ಪತ್ನಿ ಜತೆ ಜಗಳ ಮಾಡಲು ಸಾಧ್ಯವಿಲ್ಲ, ಗುರುವಾರ ಬೆಳಗ್ಗೆ ಮಗಳು ಪ್ರಿಯಾಂಕಾ ನನಗೆ ಕರೆ ಮಾಡಿ ಮಾತನಾಡಿದ್ದಳು. ಆವಾಗ ಡಿಸೆಂಬರ್‌ನಲ್ಲಿ ಶಿವಮೊಗ್ಗಕ್ಕೆ ಬರುವುದಾಗಿ ಹೇಳಿಕೊಂಡಿದ್ದಳು ಎಂದಿದ್ದಾರೆ.