Breaking News

ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ

Spread the love

ಳ್ಳಾರಿ: ಗಣಿಬಾಧಿತ ಸಂಡೂರು ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆ ಕಣ ಕಾವೇರಿದೆ. ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಉಭಯ ಪಕ್ಷಗಳ ಸಚಿವರು, ಶಾಸಕರು, ಮುಖಂಡರು ಕ್ಷೇತ್ರದಲ್ಲೇ ಬಿಡಾರ ಹೂಡಿ ಮತಬೇಟೆ ನಡೆಸಿದ್ದಾರೆ. ಕಾಂಗ್ರೆಸ್‌ ಕ್ಷೇತ್ರ ಉಳಿಸಿಕೊಳ್ಳುವ ತವಕದಲ್ಲಿದ್ದರೆ, ಬಿಜೆಪಿ ಕ್ಷೇತ್ರವನ್ನು ಕಸಿದುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.

 

ಕಾಂಗ್ರೆಸ್‌ ಒಂದೇ ಕುಟುಂಬಕ್ಕೆ ಟಿಕೆಟ್‌ ನೀಡಿದೆ ಎಂಬುದೇ ಬಿಜೆಪಿಗೆ ಅಸ್ತ್ರವಾದರೆ, ಕಾಂಗ್ರೆಸ್‌ಗೆ ಬಿಜೆಪಿ ಅಭ್ಯರ್ಥಿ ಸ್ಥಳೀಯರಲ್ಲ, ಹೊರಗಿನವರು ಎಂಬುದು ಪ್ರತ್ಯಸ್ತ್ರವಾಗಿದೆ. ಸಂಡೂರು ಎಸ್‌ಟಿ ಮೀಸಲು ಕ್ಷೇತ್ರದಿಂದ 2008ರಿಂದ 2023ರವರೆಗೆ ಸತತ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹಾಲಿ ಸಂಸದ ಈ. ತುಕಾರಾಂ, 2023ರ ಲೋಕಸಭೆ ಚುನಾವಣೆಗೆ ಸ್ಪ ರ್ಧಿಸಿ ಗೆಲ್ಲುವ ಮೂಲಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಸಂಡೂರು ಕ್ಷೇತ್ರಕ್ಕೆ ಪುನಃ ಉಪಚುನಾವಣೆ ಎದುರಾಗಿದೆ.

ಉಪಚುನಾವಣೆಯಲ್ಲಿ ಸಂಸದ ಈ. ತುಕಾರಾಂ ಪತ್ನಿ ಅನ್ನಪೂರ್ಣ ಕಾಂಗ್ರೆಸ್‌ನಿಂದ ಸ್ಪ ರ್ಧಿಸಿದ್ದರೆ, ಬಿಜೆಪಿಯಿಂದ ನೆರೆಯ ಕೂಡ್ಲಿಗಿ ಮೂಲದ ಬಂಗಾರು ಹನುಮಂತು ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುತ್ತಿರುವ ಕಾಂಗ್ರೆಸ್‌ಗೆ ಈ ಬಾರಿಯೂ ಮತದಾರ ಕೈ ಬಿಡಲ್ಲ ಎಂಬ ವಿಶ್ವಾಸವಿದ್ದರೆ, ಸಂಡೂರಲ್ಲಿ ಕಮಲ ಅರಳಿಸಬೇಕೆಂಬ 2 ದಶಕಗಳ ಪ್ರಯತ್ನಕ್ಕೆ ಈ ಬಾರಿ ಜಯ ಸಿಗಲಿದೆ ಎಂಬ ಕಾತರ ಕೇಸರಿ ಪಡೆಯದ್ದು.

ಅಭ್ಯರ್ಥಿಗಳ ಸಾಮರ್ಥ್ಯ
ಸಂಡೂರು ಕ್ಷೇತ್ರದಲ್ಲಿ ಆರಂಭದಿಂದಲೂ ಸ್ಥಳೀಯರೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮತದಾರರು ಸಹ ಸ್ಥಳೀಯರಿಗೆ ಮನ್ನಣೆ ನೀಡುತ್ತಲೇ ಬಂದಿದ್ದರಿಂದ ಹೊರಗಿನಿಂದ ಬಂದು ಸ್ಪರ್ಧಿಸಿದ್ದ ಅಭ್ಯರ್ಥಿಗಳಾರೂ ಕ್ಷೇತ್ರದಲ್ಲಿ ಯಶಸ್ಸು ಕಂಡಿಲ್ಲ. ಹೀಗಾಗಿ ಸ್ಥಳೀಯರು’ ಎಂಬುದೇ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಬಹುದೊಡ್ಡ ಬಲ. ಜತೆಗೆ ಕಳೆದ 2 ದಶಕಗಳಲ್ಲಿ ಪತಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಸಂಡೂರು ಕಾಂಗ್ರೆಸ್‌ ಭದ್ರಕೋಟೆ ಎಂಬ ಮಾತು ಕಾಂಗ್ರೆಸ್‌ ಅಭ್ಯರ್ಥಿಗೆ ಶ್ರೀರಕ್ಷೆಯಾಗಿದೆ

ರೆಡ್ಡಿ, ರಾಮುಲು ಬಲ
ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಈ ಕ್ಷೇತ್ರದಲ್ಲಿ 2ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 2023ರಲ್ಲಿ ಕೂಡ್ಲಿಗಿ ಟಿಕೆಟ್‌ಗಾಗಿ ಪ್ರಯತ್ನಿಸಿದರೂ ಸಿಗಲಿಲ್ಲ. ಇದೀಗ ಪುನಃ ಸಂಡೂರು ಉಪಚುನಾವಣೆಯಲ್ಲಿ ಟಿಕೆಟ್‌ ಗಿಟ್ಟಿಸಿಕೊಂಡು ಕಣಕ್ಕಿಳಿದಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಸಂಡೂರು ಕ್ಷೇತ್ರದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿ ಹಲವಾರು ಮುಖಂಡರು ಅವರ ಪರ ಪ್ರಚಾರ ನಡೆಸುತ್ತಿದ್ದಾರೆ. ಜತೆಗೆ ಕ್ಷೇತ್ರದ 2 ದಶಕಗಳ ರಾಜಕೀಯ ಮೀಸಲಾತಿಯನ್ನು ಒಂದೇ ಕುಟುಂಬಕ್ಕೆ ನೀಡಿರುವುದು ಮತದಾರರ ಮೇಲೆ ಪರಿಣಾಮ ಬೀರಿದರೆ ಮಾತ್ರ ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಗಣಿ-ಮೀಸಲಾತಿಯೇ ಪ್ರಮುಖ ವಿಷಯ
ಜನಾರ್ದನ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು, ಅವರ ಹೆಸರು ಹೇಳದೇ ಪರೋಕ್ಷವಾಗಿ 2008ರಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ವಿಷಯ ಕಾಂಗ್ರೆಸ್‌ ಪುನಃ ಪ್ರಸ್ತಾಪಿಸುತ್ತಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಪ್ರಚಾರ ಮಾಡುತ್ತಿರುವ ಶಾಸಕರು, ಮುಖಂಡರು, ಕಾಂಗ್ರೆಸ್‌ 2 ದಶಕಗಳ ಕಾಲ ಎಂಪಿ-ಎಂಎಲ್‌ಎ ಟಿಕೆಟ್‌ ಹಾಗೂ ರಾಜಕೀಯ ಮೀಸಲಾತಿಯನ್ನು ಒಂದೇ ಕುಟುಂಬಕ್ಕೆ ನೀಡಿದೆ. ನಾಲ್ಕು ಬಾರಿ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಇಲ್ಲ. ಇಲ್ಲಿನ ಡಿಎಂಎಫ್‌, ಕೆಎಂಇಆರ್‌ಸಿ ಅನುದಾನಗಳನ್ನೆಲ್ಲ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದು, ಬದಲಾವಣೆಗಾಗಿ ಬಿಜೆಪಿಗೆ ಮತ ನೀಡುವಂತೆ ಮತದಾರರ ಮನವೊಲಿಸುವಲ್ಲಿ ತೊಡಗಿದ್ದಾರೆ.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ