Breaking News

ಇನ್ನಷ್ಟು ಹೈಟೆಕ್ ಆಗಲಿವೆ ‘DL, RC’ : ಶೀಘ್ರವೇ ರಾಜ್ಯದಲ್ಲಿ ಹೊಸ `ಸ್ಮಾರ್ಟ್ ಕಾರ್ಡ್’ ಯೋಜನೆ ಅನುಷ್ಠಾನ!

Spread the love

ಬೆಂಗಳೂರು : ಡ್ರೈವಿಂಗ್ ಲೈಸೆನ್ಸ್ (DL) ಹಾಗೂ ವಾಹನ ನೋಂದಣಿ (RC) ಕಾರ್ಡ್‌ಗಳನ್ನು ಇನ್ನಷ್ಟು ಹೈಟೆಕ್ ಹಾಗೂ ಗುಣ ಮಟ್ಟದ ರೂಪದಲ್ಲಿ ಕೊಡಲು ಸಾರಿಗೆ ಇಲಾಖೆ ಯೋಜನೆ ಸಿದ್ಧಪಡಿಸಿದೆ. ಕ್ಯೂಆರ್ ಕೋಡ್ ಮತ್ತು ಚಿಪ್ ಆಧಾರಿತ ಕಾರ್ಡ್‌ಗಳು ವಿತರಣೆಯಾಗಲಿದ್ದು, 2025ರ ಜನವರಿ ಅಥವಾ ಫೆಬ್ರವರಿಯಿಂದ ಹೊಸ ಸ್ಮಾರ್ಟ್ ಕಾರ್ಡ್ ಯೋಜನೆ ಅನುಷ್ಠಾನ ಪ್ರಕ್ರಿಯೆ ಆರಂಭವಾಗಲಿದೆ.

ಈ ಕುರಿತು ಇ ಆಡಳಿತ ಕ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೂಚನೆ ನೀಡಿದ್ದಾರೆ.

ಪ್ರಸ್ತುತ ಕೊಡುತ್ತಿರುವ ಆರ್‌ಸಿ ಹಾಗೂ ಡಿಎಲ್‌ಗಳು ಪಾಲಿ ವಿನೈಲ್ ಕ್ಲೋರೈಡ್ (ಪಿವಿಸಿ) ಕಾರ್ಡ್‌ಗಳಾಗಿವೆ.ಹೊಸ ಯೋಜನೆಯಲ್ಲಿ ಪಾಲಿ ಕಾರ್ಬನೇಟ್ ಕಾರ್ಡ್ (ಪಿಸಿಸಿ)ಗಳನ್ನು ವಿತರಣೆ ಮಾಡಲಾಗುತ್ತದೆ. ಇವು ಬ್ಯಾಂಕ್‌ಗಳು ವಿತರಿಸುವ ಕಾರ್ಡ್‌ಗಳ ಮಾದರಿಯಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಕಾರ್ಡ್‌ಗಳಾಗಿರುತ್ತವೆ.

ಮೊದಲಿನ ಕಾರ್ಡ್‌ಗಳಲ್ಲಿ ಹಳೆಯದಾಗುತ್ತಿದ್ದಂತೆ ಕಾರ್ಡ್ ಮೇಲಿರುವ ಅಕ್ಷರಗಳು ಅಳಿಸಿ ಹೋಗುತ್ತಿತ್ತು. ಆದರೆ, ಪಿಸಿಸಿ ಕಾರ್ಡ್‌ಗಳಲ್ಲಿ ಲೇಸರ್ ಇನ್‌ಗ್ರೀಡಿಂಗ್ ಇರುವುದರಿಂದ ಎಷ್ಟೇ ವರ್ಷಗಳಾದರೂ ಅಕ್ಷರಗಳು ಅಳಿಸಿ ಹೋಗುವುದಿಲ್ಲ. ಕಾರ್ಡ್‌ಗಳು ಸಹ ಮುರಿಯುವ ಸಾಧ್ಯತೆ ಕಡಿಮೆ.ಹೊಸ ಸ್ಮಾರ್ಟ್ ಕಾರ್ಡ್ ಯೋಜನೆಗೆ ಈಗಾಗಲೇ ಟೆಂಡ‌ರ್ ಆಹ್ವಾನಿಸಿದ್ದು, ಅದರಂತೆ ಟೆಂಡರ್ ಪ್ರಕ್ರಿಯೆಗಳು ಮುಂದುವರಿದಿದೆ.

ಈವರೆಗೆ ಸ್ಮಾರ್ಟ್‌ ಕಾರ್ಡ್‌ಗಳಲ್ಲಿ ಬರೀ ಚಿಪ್ ವ್ಯವಸ್ಥೆ ಇತ್ತು. ಹೊಸ ಕಾರ್ಡ್‌ಗಳಲ್ಲಿ ಚಿಪ್ ಜತೆಗೆ ಕ್ಯೂಆರ್ ಕೋಡ್ ಸಹ ಇರಲಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಡಿಎಲ್ ಹಾಗೂ ಆರ್‌ಸಿ ಕಾರ್ಡ್‌ನಲ್ಲಿರುವ ಪ್ರಾಥಮಿಕ ಮಾಹಿತಿ ತಕ್ಷಣವೇ ಸಿಗಲಿದೆ. ಸಂಪೂರ್ಣ ಮಾಹಿತಿ ಬೇಕಾದರೆ ಚಿಪ್‌ ಕಾರ್ಡ್ ರೀಡರ್ ಬಳಸಿ ನೋಡಬಹುದು.

‘ಇ’ ವ್ಯವಸ್ಥೆಯಿಂದ

* ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ವಾಹನ, ಮಾಲೀಕರ ವಿವರ ಲಭ್ಯವಾಗುತ್ತದೆ‌.

* ಅಪಘಾತ, ಕಳ್ಳತನ, ಸಂಚಾರ ನಿಯಮ ಉಲ್ಲಂಘನೆ ವೇಳೆ ಪರಿಶೀಲನೆಗೆ ಉಪಯುಕ್ತವಾಗಿದೆ‌

* ವಾಹನ ಹಾಗೂ ವಾಹನ ಮಾಲೀಕರ ಮಾಹಿತಿ ದೃಢೀಕರಣ ಪೊಲೀಸರಿಗೆ ಸುಲಭ ಕಾರ್ಯ

* ಕಾರ್ಡ್‌ಗಳಲ್ಲಿರುವ ಅಕ್ಷರ ಅಳಿಸಿ ಹೋಗಲ್ಲ, ಮುರಿದು ಹೋಗುವ ಸಾಧ್ಯತೆಯೂ ಕಡಿಮೆ

* ಹಳೇ ಕಂಪ್ಯೂಟರ್. ಪ್ರಿಂಟರ್‌ಗಳಿಂದ ತುಂಬಿರುವ ಕಚೇರಿಗಳಿಗೆ ಹೈಟೆಕ್ ಸೌಲಭ್ಯ ಇದರಿಂದ‌ ಇ ಆಡಳಿತ ಸೇವೆಗೆ‌ ಬಲ

* ಕೇಂದ್ರೀಕೃತ ವ್ಯವಸ್ಥೆ ಜಾರಿಯಿಂದ ಸ್ಮಾರ್ಟ್ ಕಾರ್ಡ್ ಪೂರೈಕೆಯಲ್ಲಿ ವ್ಯತ್ಯಾಸ ಆಗುವುದಿಲ್ಲ.

ಸ್ಮಾರ್ಟ್‌ ಕಾರ್ಡ್ ಪ್ರಿಂಟಿಂಗ್ ವ್ಯವಸ್ಥೆಯನ್ನು ಆಯಾ ಆರ್‌ಟಿಒ ಕಚೇರಿಯಲ್ಲೇ ಮಾಡಲಾಗಿತ್ತು. ಆದರೆ, ಹೊಸ ಯೋಜನೆಯಲ್ಲಿ ಶಾಂತಿನಗರದಲ್ಲಿರುವ ಸಾರಿಗೆ ಆಯುಕ್ತರ ಕೇಂದ್ರ ಕಚೇರಿಯಲ್ಲೇ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗುವುದು. ಒಂದೇ ಕಡೆ ಮುದ್ರಿಸಿ ಎಲ್ಲ ಆರ್‌ಟಿಒ ಕಚೇರಿಗಳಿಗೆ ಪೂರೈಕೆ ಮಾಡಲಾಗುವುದು.

ವಾಹನ ಮಾಲೀಕನ ಹೆಸರು, ವಿಳಾಸ, ಫೋಟೋ, ಜನ್ಮ ದಿನಾಂಕ, ಸಿಂಧುತ್ವ ಅವಧಿ, ಮೊಬೈಲ್ ಸಂಖ್ಯೆ ಸೇರಿ 25ಕ್ಕೂ ಹೆಚ್ಚು ವಿವರ ಡಿಎಲ್‌ನಲ್ಲಿ ಇರಲಿದೆ. ಆರ್‌ಸಿ ಕಾರ್ಡ್‌ನಲ್ಲಿ ವಾಹನ ಮಾದರಿ, ನೋಂದಣಿ ದಿನಾಂಕ, ತಯಾರಿಕಾ ದಿನ, ಮಾಲೀಕರ ವಿವರ, ತಯಾರಿಕಾವಿವರ, ಇಂಜಿನ್ ನಂಬರ್, ಚಾಸ್ಸಿ ನಂಬರ್, ನೋಂದಣಿ ಸಂಖ್ಯೆ ಇನ್ನಿತರ ಮಾಹಿತಿ ಇರಲಿದೆ.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ