Breaking News

ಕುಗ್ರಾಮದ ಮಕ್ಕಳ ವಿಮಾನ ಏರುವ ಕನಸನ್ನುನನಸು ಮಾಡಿದ ಶಾಲೆಯ ಶಿಕ್ಷಕ

Spread the love

ಬೆಳಗಾವಿ: ಕುಗ್ರಾಮದ ಮಕ್ಕಳ ವಿಮಾನ ಏರುವ ಕನಸನ್ನು ಬೆಳಗಾವಿ ತಾಲ್ಲೂಕು ಸೋನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ ದೇಯಣ್ಣವರ ಅವರು ನನಸು ಮಾಡಿದರು. ಶಾಲೆಗೆ ಪ್ರತಿದಿನವೂ ತಪ್ಪದೇ ಬರುವುದಾಗಿ ಹೇಳಿ ಮಾತು ಉಳಿಸಿಕೊಂಡ ಮಕ್ಕಳಿಗೆ ಅವರು ಬೆಳಗಾವಿಯಿಂದ ಹೈದರಾಬಾದ್‌ವರೆಗೆ ವಿಮಾನದ ಪ್ರಯಾಣದ ಕೊಡುಗೆ ನೀಡಿದರು.

 

ಪ್ರಕಾಶ ದೇಯಣ್ಣವರ ಅವರು ತಮ್ಮ ನಾಲ್ಕು ತಿಂಗಳ ವೇತನದ ಒಟ್ಟು ₹ 2.10 ಲಕ್ಷ ಹಣವನ್ನು ಅವರು ವಿಮಾನ ಪ್ರವಾಸಕ್ಕೆ ವಿನಿಯೋಗಿಸಿದರು. 17 ಮಕ್ಕಳು, ಮೂವರು ಶಿಕ್ಷಕರು ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಸೇರಿ ಎಲ್ಲ 21 ಜನರ ವಿಮಾನಯಾನ, ಊಟ, ವಸತಿ ವೆಚ್ಚವನ್ನು ಅವರೇ ನಿಭಾಯಿಸಿದರು. ಹೈದರಾಬಾದ್‌ನ ರಾಮೋಜಿರಾವ್ ಫಿಲ್ಮ್ ಸಿಟಿ, ಚಾರ್ ಮಿನಾರ್, ಸ್ನೊ ವರ್ಲ್ಡ್‌, ಗೋಲ್ಕೊಂಡ ಕೋಟೆ, ಸಲಾರ್ ಜಂಗ್ ವಸ್ತು ಸಂಗ್ರಹಾಲಯ ವೀಕ್ಷಿಸಿ, ಗ್ರಾಮಕ್ಕೆ ಮರಳಿದರು.

‘1 ರಿಂದ 7ನೇ ತರಗತಿಯವರೆಗಿನ ಸೋನಟ್ಟಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇತ್ತು. ಎಷ್ಟೇ ಪ್ರಯತ್ನಿಸಿದರೂ ಅವರು ಹಾಜರಾಗುತ್ತಿರಲಿಲ್ಲ. ಅವರನ್ನು ಪಾಲಕರು ತಮ್ಮೊಂದಿಗೆ ಕೆಲಸದ ಸ್ಥಳಗಳಿಗೆ ಕರೆದೊಯ್ಯುತ್ತಿದ್ದರು. ಅದಕ್ಕೆ ನಾನೇ ಒಂದು ಉಪಾಯ ಮಾಡಿದೆ’ ಎಂದು ಪ್ರಕಾಶ ದೇಯಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಗೆ ಯಾರು ಹೆಚ್ಚು ಹಾಜರಾತಿ ನೀಡುತ್ತಾರೋ, ಅವರನ್ನು ವಿಮಾನದ ಮೂಲಕ ಪ್ರವಾಸಕ್ಕೆ ಕರೆದೊಯ್ಯುವೆ ಎಂದು ಹೇಳಿದೆ. ಆ ದಿನದಿಂದ ಶಾಲೆಯ ಹಾಜರಾತಿ ಹೆಚ್ಚಾಯಿತು. ಹಾಜರಾತಿ ಹೆಚ್ಚಿರುವ 25 ಮಕ್ಕಳನ್ನು ಪ್ರವಾಸಕ್ಕೆ ಆಯ್ಕೆ ಮಾಡಿದೆ. ಅವರಲ್ಲಿ 17 ಮಕ್ಕಳು ಗುರುವಾರ (ನ.7) ವಿಮಾನದಲ್ಲಿ ಬಂದರು’ ಎಂದರು.

ಬೆಳಗಾವಿಯಿಂದ 11 ಕಿ.ಮೀ ದೂರದಲ್ಲಿರುವ ಸೋನಟ್ಟಿಯಲ್ಲಿ ಪರಿಶಿಷ್ಟ ಪಂಗಡದವರು ಮಾತ್ರ ಇದ್ದಾರೆ. ಆ ಗ್ರಾಮದ ಯಾವೊಬ್ಬ ವ್ಯಕ್ತಿಯೂ ವಿಮಾನ ಹತ್ತಿಲ್ಲ. 57 ವರ್ಷ ವಯಸ್ಸಿನ ಪ್ರಕಾಶ ಅವರು ಈ ಗ್ರಾಮ ಶಾಲೆಯನ್ನು ಆದರ್ಶ ಶಾಲೆ ಮಾಡುವಲ್ಲಿ ಶ್ರಮಿಸಿದ್ದಾರೆ. ಸ್ವಂತ ಖರ್ಚಿನಲ್ಲೇ ಸೌಲಭ್ಯ ಒದಗಿಸಿದ್ದಾರೆ.

 ಹೈದರಾಬಾದ್‌ಗೆ ಹಾರುವ ಮುನ್ನ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಫೋಟೊ ಕ್ಲಿಕ್ಕಿಸಿಕೊಂಡ ಸೋನಟ್ಟಿ ಗ್ರಾಮದ ಶಿಕ್ಷಕರು ಹಾಗೂ ಮಕ್ಕಳು ಪ್ರಕಾಶ ದೇಯಣ್ಣವರಪ್ರಕಾಶ ದೇಯಣ್ಣವರ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋನಟ್ಟಿ ಸರ್ಕಾರಿ ಶಾಲೆಗಳು ಮತ್ತು ಮಕ್ಕಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ತೋರಿಸಲು ಈ ಪ್ರಯೋಗ ಮಾಡಿರುವೆ. ಮುಂದಿನ ವರ್ಷ ದೆಹಲಿಗೆ ವಿಮಾನಯಾನ ಮಾಡಿಸುವೆ.ಶಿವಪ್ರಸಾದ ಕರೇನಕೊಂಪಿ ವಿದ್ಯಾರ್ಥಿ ಸೋನಟ್ಟಿವಿಮಾನ ಹಾರಾಟ ಶುರು ಮಾಡುವ ಮುನ್ನ ಭಯವಾಗುತ್ತಿತ್ತು. ಒಂದು ನಿಮಿಷದ ಬಳಿಕ ಕಿಟಕಿ ಆಚೆ ನೋಡಿದೆ. ರೋಮಾಂಚನ ಆಯಿತು. ಲಕ್ಷ್ಮಿ ಗಂಗೇನಾಳ ವಿದ್ಯಾರ್ಥಿನಿ ಸೋನಟ್ಟಿನಾನು ವಿಮಾನದಲ್ಲಿ ಹಾರಾಡುತ್ತೇನೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ಎಂದು ಮರೆಯದ ದಿನ ನಿರ್ಮಿಸಿದ್ದು ನಮ್ಮ ಗುರುಗಳು


Spread the love

About Laxminews 24x7

Check Also

ಮೂಡಲಗಿ: ರೇಷ್ಮೆ ತಂತ್ರಜ್ಞಾನಿ ಸೋನವಾಲಕರ

Spread the love ಮೂಡಲಗಿ: ಬಾಲ್ಯದಲ್ಲಿ ಶಿಕ್ಷಣ ಪಡೆಯಲು ಅನುಕೂಲವಿಲ್ಲದೆ ಎಮ್ಮೆ ಕಾಯುತ್ತಿದ್ದ ಬಾಲಕ, ಇಂದು ರೇಷ್ಮೆ ತಂತ್ರಜ್ಞಾನ ರಂಗ ದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ