ಬೆಂಗಳೂರು: ‘ಕೋವಿಡ್ -19 ವೇಳೆಯಲ್ಲಿ ಉಪಕರಣಗಳು ಮತ್ತು ಔಷಧಿಗಳ ಖರೀದಿಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿದ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ತನಿಖಾ ಆಯೋಗವು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಲು ಶಿಫಾರಸು ಮಾಡಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶನಿವಾರ(ನ9) ಹೇಳಿಕೆ ನೀಡಿದ್ದಾರೆ.
”ಬಿಜೆಪಿ ಅಧಿಕಾರದಲ್ಲಿದ್ದಾಗ ಕೋವಿಡ್ ಸಮಯದಲ್ಲಿ ಉಪಕರಣಗಳು ಮತ್ತು ಔಷಧಿಗಳ ಖರೀದಿಯಲ್ಲಿ ಲೂಟಿ ನಡೆದಿರುವುದು ಸ್ಪಷ್ಟವಾಗಿದೆ. ಅಂದಿನ ಸರಕಾರವು ಮೃತ ದೇಹಗಳ ಮೇಲೆ ಹಣ ಸಂಪಾದಿಸಿತು, ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡಿತು ಎಂಬ ಕಾಂಗ್ರೆಸ್ ನ ಆರೋಪವನ್ನು ವರದಿಯು ಸಾಬೀತುಪಡಿಸುತ್ತದೆ” ಎಂದು ದಿನೇಶ್ ಗುಂಡೂರಾವ್ ಹೇಳಿದರು.
“ಲೋಪದೋಷಗಳಿದ್ದವು. ಕೋವಿಡ್ ಸಮಯದಲ್ಲಿ ಯಾರೂ ಅವರನ್ನು ಪ್ರಶ್ನಿಸಲು ಸಾಧ್ಯವಾಗಲಿಲ್ಲ. ಆ ಸಂದರ್ಭವನ್ನು ಉಪಯೋಗಿಸಿಕೊಂಡು ಅಂದಿನ ಸರಕಾರ ಲೂಟಿ ಮಾಡಿ ಅವರಿಗೆ ಅನುಕೂಲವಾಗುವ ನಿರ್ಧಾರಗಳನ್ನು ನಿಯಮ ಉಲ್ಲಂಘಿಸಿ ತೆಗೆದುಕೊಂಡಿತು. ಆಗ ವಿರೋಧ ಪಕ್ಷವಾಗಿ ನಾವು ಈ ವಿಷಯವನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದ್ದೇವೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ನಾವು ತನಿಖೆ ನಡೆಸಿ ವರದಿ ಸಲ್ಲಿಸಲು ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿದ್ದೇವೆ” ಎಂದು ಸುದ್ದಿಗಾರರಿಗೆ ತಿಳಿಸಿದರು.