ವಾಷಿಂಗ್ಟನ್: ಇಡೀ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ ಜಯಭೇರಿ ಬಾರಿಸಿರುವುದಾಗಿ ಬುಧವಾರ (ನ.06) ಘೋಷಿಸುವ ಮೂಲಕ ಟ್ರಂಪ್ 2ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ 270ಕ್ಕೂ ಅಧಿಕ ಎಲೆಕ್ಟ್ರೊರಲ್ ಮತ ಪಡೆದು ಜಯಭೇರಿ ಬಾರಿಸಿದ್ದು, ಕಮಲಾ ಹ್ಯಾರಿಸ್ 224 ಸ್ಥಾನ ಪಡೆದು ಪರಾಜಯಗೊಳ್ಳುವ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆಯಾಗಬೇಕೆಂಬ ಕನಸು ಭಗ್ನಗೊಂಡಿದೆ.
ಅಮೆರಿಕದ ಪ್ರಮುಖ ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದ್ದ ಪರಿಣಾಮ ರಿಪಬ್ಲಿಕನ್ ಪಕ್ಷ ಮತ್ತೊಮ್ಮೆ ಟ್ರಂಪ್ ಅಧ್ಯಕ್ಷ ಪಟ್ಟಕ್ಕೆ ಏರುವಂತಾಗಿದೆ. ಟೆಕ್ಸಾಸ್ ನ ಎಲ್ಲಾ 40 ಎಲೆಕ್ಟ್ರೊರಲ್ ಮತ ಪಡೆದು ಟ್ರಂಪ್ ಗೆಲುವಿನ ನಗು ಬೀರಿದ್ದಾರೆ.