ಬೆಳಗಾವಿ: ‘ತಹಶೀಲ್ದಾರ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರುದ್ರಣ್ಣ ಯಡವಣ್ಣವರ ಅವರ ಪ್ರಕರಣದಲ್ಲಿ ನನ್ನ ಆಪ್ತ ಸಹಾಯಕ ಸೋಮು ಬಾಗಿಯಾದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕು. ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪ್ರತಿಕ್ರಿಯಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಮ್ಮ ಕೆಲಸಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪಿ.ಎ.ಗಳನ್ನು ನೇಮಕ ಮಾಡಿಕೊಂಡಿರುತ್ತೇವೆ. ಸಚಿವರಿಗೆ ಹತ್ತು ಹದಿನೈದು ಪಿ.ಎ.ಗಳು ಇರುವುದು ಸಹಜ. ಸೋಮು ಹೆಸರು ಪ್ರಕರಣದಲ್ಲಿರುವುದು ನನಗೆ ಮಾಧ್ಯಮಗಳ ಮೂಲಕವೇ ಗೊತ್ತಾಗಿದೆ. ನಾನು ರುದ್ರಣ್ಣ ಅವರನ್ನು ಯಾವತ್ತೂ ಭೇಟಿಯಾಗಿಲ್ಲ, ಯಾವ ಕೆಲಸಕ್ಕೂ ಸಂಪರ್ಕಿಸಿಲ್ಲ’ ಎಂದರು.ಇಂಥ ಘಟನೆ ನಡೆಯಬಾರದಿತ್ತು. ರುದ್ರಣ್ಣ ಅವರ ಕುಟುಂಬಕ್ಕೆ ನಾನು ಧೈರ್ಯ ಹೇಳುತ್ತೇನೆ. ಈಗ ಪ್ರಾಥಮಿಕ ತನಿಖೆ ಶುರುವಾಗಿದೆ. ಸತ್ಯಾಸತ್ಯ ಹೊರಬರಲಿ ಎಂಬುದೇ ನನ್ನ ಆಸೆ. ಮಂಗಳವಾರ ಇಡೀ ದಿನ ಕಾರ್ಯಕ್ರಮಗಳಲ್ಲಿ ಇದ್ದ ಕಾರಣ ನನಗೆ ಪ್ರತಿಕ್ರಿಯೆ ನೀಡಲು ಆಗಲಿಲ್ಲ’ ಎಂದೂ ಅವರು ಹೇಳಿದರು.
Laxmi News 24×7