ಹಾಸನ: ಜೆಡಿಎಸ್-ಬಿಜೆಪಿಯವರು ಟಿಕೆಟ್ ನೀಡಲಿಲ್ಲ ಎಂಬ ಸಿಂಪಥಿ ಗಳಿಸಿಕೊಳ್ಳಲು ಸಿ.ಪಿ. ಯೋಗೇಶ್ವರ್ ನಾಟಕ ಆಡಿದ್ದು, ಮೂರು ತಿಂಗಳ ಹಿಂದೆಯೇ ಆಗಿದ್ದ ನಿರ್ಧಾರದಂತೆ ಈಗ ಕಾಂಗ್ರೆಸ್ ಸೇರಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಶನಿವಾರ ರಾತ್ರಿ ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಪ್ರತಿ ಚುನಾವಣೆಯಲ್ಲೂ ಪಕ್ಷಾಂತರ ಮಾಡುತ್ತಾರೆ.
ಇದುವರೆಗೆ ಏಳು ಬಾರಿ ಪಕ್ಷ ಬದಲಿಸಿದ್ದಾರೆ. ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲಿಗೆ ಹೋಗುತ್ತಾರೆ. ಹಿಂದೆ ಬಿಜೆಪಿ ಆಡಳಿತ ಇದ್ದುದರಿಂದ ಇಲ್ಲಿಗೆ ಬಂದಿದ್ದು, ಅದಕ್ಕೂ ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗ ಅಲ್ಲಿಗೆ ಹೋಗಿದ್ದರು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಅದಕ್ಕಾಗಿಯೇ ಯೋಗೇಶ್ವರ್ ಅಲ್ಲಿಗೆ ಹೋಗಿದ್ದಾರೆ ಎಂದು ದೂರಿದರು.
ಪ್ರತಿ ಚುನಾವಣೆಗೂ ಒಂದು ಪಕ್ಷ, ಒಂದು ಚಿನ್ಹೆಯನ್ನು ಆಯ್ಕೆ ಮಾಡುತ್ತಾರೆ. ಆದರೆ, ಶಾಶ್ವತವಾಗಿ ಕೆಲಸ ಮಾಡುವವರನ್ನು ಜನರು ಆಯ್ಕೆ ಮಾಡುತ್ತಾರೆ ಎಂದರು.
ಚನ್ನಪಟ್ಟಣದ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರ ₹150 ಕೋಟಿ ಕೊಟ್ಟಿದೆ. ಅದನ್ನು ನೆನಪಿಟ್ಟುಕೊಂಡು, ಬಿಜೆಪಿ, ನರೇಂದ್ರ ಮೋದಿ, ದೇವೇಗೌಡರ ಪರವಾಗಿ ಅಲ್ಲಿನ ಜನರು ನಿಖಿಲ್ ಅವರಿಗೆ ಮತ ಹಾಕಲಿದ್ದಾರೆ ಎಂದು ಹೇಳಿದರು.