ಬೆಳಗಾವಿ: ‘ತಾಕತ್ತಿದ್ದರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಿ’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು, ಸಚಿವ ಬೈರತಿ ಸುರೇಶ್ ಅವರಿಗೆ ಸವಾಲು ಹಾಕಿದರು.
ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೈರತಿ ಸುರೇಶ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಸಾವಿರಾರು ಕಡತಗಳನ್ನು ತಂದು, ಸುಟ್ಟು ಹಾಕಿದ್ದಾರೆ.
ಅದರ ಬಗ್ಗೆ ನಾನು ಧ್ವನಿ ಎತ್ತಿದ್ದಕ್ಕೆ ನನ್ನ ವಿರುದ್ಧ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.
‘ಈ ಹಿಂದೆ ಹಲವಾರು ಸರ್ಕಾರದವರು ನನ್ನ ಬಗ್ಗೆ ಆರೋಪ ಮಾಡಿ, ತನಿಖೆ ಮಾಡಿದರು. ಆದರೆ, ಶೋಭಾ ಕರಂದ್ಲಾಜೆ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ’ ಎಂದು ತಿರುಗೇಟು ಕೊಟ್ಟರು.
‘ನನ್ನ ವಿರುದ್ಧ ದಾಖಲೆ ಬಹಿರಂಗಕ್ಕೆ ಸಿ.ಎಂ ಕಾನೂನು ಸಲಹೆಗಾರ ಪೊನ್ನಣ್ಣ ಅವರನ್ನು ನೇಮಿಸಲಾಗಿದೆ. ಆದರೆ, ಪೊನ್ನಣ್ಣ ಅವರಿಗೂ ವಿದ್ಯುತ್ ಇಲಾಖೆಗೂ ಏನು ಸಂಬಂಧ? ನಕಲಿ ಕಡತ ಸೃಷ್ಟಿಸಲು ಪೊನ್ನಣ್ಣ ಅವರಿಗೆ ಜವಾಬ್ದಾರಿ ಕೊಟ್ಟಿದ್ದೀರಿ. ಇದರಲ್ಲೂ ಒಂದು ಭ್ರಷ್ಟಾಚಾರ ಮಾಡಲು ಹೊರಟಿದ್ದೀರಿ. ನಿಮ್ಮ ಬಳಿ ಇರುವ ದಾಖಲೆ ತಕ್ಷಣವೇ ಹೊರಗೆ ಹಾಕಿ’ ಎಂದರು.