ಬೆಳಗಾವಿ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಉತ್ತರ ಕರ್ನಾಟಕದವರನ್ನೇ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ.
ಈ ಭಾಗದ ಸಾಹಿತಿಗಳು, ಕವಿಗಳು, ಲೇಖಕರು ಜಾಲತಾಣಗಳಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದು, ‘ಉತ್ತರ ಕರ್ನಾಟಕದವರಿಗೆ ಅವಕಾಶ ನೀಡಬೇಕು’ ಎಂದು ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ.
ಕೆಲವರು ಇಂಥವರನ್ನೇ ಆಯ್ಕೆ ಮಾಡಬೇಕೆಂದು ತಿಳಿಸಿದ್ದಾರೆ. ಈ ಕುರಿತಾಗಿ ನಡೆಯುತ್ತಿರುವ ಚರ್ಚೆಯೂ ಕಾವೇರುತ್ತಿದೆ.
‘ಈವರೆಗೆ ನಡೆದಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಆಗಿರುವ ಸರ್ವಾಧ್ಯಕ್ಷರ ಆಯ್ಕೆ ಗಮನಿಸಿದಾಗ, ಉತ್ತರ ಕರ್ನಾಟಕದ ಸಾಹಿತಿಗಳಿಗೆ ಸಿಕ್ಕಿರುವ ಅವಕಾಶ ಕಡಿಮೆ. ಇನ್ನೂ ದಕ್ಷಿಣ ಕರ್ನಾಟಕದಲ್ಲಿ ನಡೆದ ಸಮ್ಮೇಳನಗಳಲ್ಲಿ ಉತ್ತರದವರನ್ನು, ಉತ್ತರ ಕರ್ನಾಟಕದಲ್ಲಿನ ಸಮ್ಮೇಳನಗಳಲ್ಲಿ ದಕ್ಷಿಣದವರನ್ನೇ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ ಉದಾಹರಣೆಗಳೂ ಸಾಕಷ್ಟಿವೆ. ಹಾಗಾಗಿ ಮಂಡ್ಯದಲ್ಲಿನ ಸಮ್ಮೇಳನಕ್ಕೆ ಉತ್ತರ ಕರ್ನಾಟಕದ ಸಾಹಿತಿ ಆಯ್ಕೆಯೇ ಸೂಕ್ತ’ ಎಂದು ಗದಗ ಜಿಲ್ಲೆಯ ಶಿರಹಟ್ಟಿಯ ಕವಿ ಸಂತೋಷ ಅಂಗಡಿ ಹೇಳಿದ್ದಾರೆ.
‘ಸಾಹಿತ್ಯ ಸಮ್ಮೇಳನಗಳಿಗೆ ಸರ್ವಾಧ್ಯಕ್ಷರಾಗಿ ಸಾಹಿತಿಗಳನ್ನೇ ಆಯ್ಕೆ ಮಾಡಬೇಕು. ಯಾವ ಕಾರಣಕ್ಕೂ ಸಾಹಿತ್ಯೇತರರ ಆಯ್ಕೆ ಬೇಡ’ ಎಂದು ಪ್ರತಿಪಾದಿಸಿದ್ದಾರೆ.
‘ಸಾಹಿತ್ಯ ಕೃಷಿಯಲ್ಲಿ ಗಮನಾರ್ಹ ಸಾಧನೆ ಮಾಡಿದರೂ, ಸಮ್ಮೇಳನದ ಸರ್ವಾಧ್ಯಕ್ಷರಾಗುವ ಅವಕಾಶದಿಂದ ಉತ್ತರ ಕರ್ನಾಟಕದ ಹಲವು ಸಾಹಿತಿಗಳು ವಂಚಿತರಾಗಿದ್ದಾರೆ. ಅಂಥವರನ್ನು ಈ ಸಮ್ಮೇಳನದಲ್ಲಿ ಗುರುತಿಸಬೇಕು. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಮಹತ್ವದ ಕೆಲಸ ಮಾಡಿದ, ಜನಪರ ಚಳವಳಿಗಳ ಒಡನಾಡಿಯಾದ ಸಿದ್ದಲಿಂಗ ಪಟ್ಟಣಶೆಟ್ಟಿ ಆಯ್ಕೆಯೂ ಸೂಕ್ತ’ ಎನ್ನುತ್ತಾರೆ ಬೆಳಗಾವಿ ಜಿಲ್ಲೆಯ ಕವಿ ವಿಠ್ಠಲ ದಳವಾಯಿ.
‘ಪ್ರಾದೇಶಿಕತೆ ಮಾತ್ರವಲ್ಲ; ಸಾಹಿತ್ಯಿಕ ಸಾಧನೆ ದೃಷ್ಟಿಯಿಂದಲೂ ಸಿದ್ದಲಿಂಗ ಪಟ್ಟಣಶೆಟ್ಟಿ ಆಯ್ಕೆ ಸೂಕ್ತ’ ಎಂದು ಹಾವೇರಿ ಜಿಲ್ಲೆಯ ಹಾನಗಲ್ಲದ ಸಾಹಿತಿ ವಿಜಯಕಾಂತ ಪಾಟೀಲ ಹೇಳುತ್ತಾರೆ.
‘ಈ ಸಲ ಉತ್ತರ ಕರ್ನಾಟಕದವರಿಗೆ ಸರ್ವಾಧ್ಯಕ್ಷ ಸ್ಥಾನ ಕೊಡಬೇಕು. ಅದರಲ್ಲೂ ಮಹಿಳೆಯರಿಗೆ ಕೊಟ್ಟರೆ ಇನ್ನೂ ಉತ್ತಮ’ ಎಂಬುದು ಬೆಳಗಾವಿಯ ಕವಿ ನದೀಮ್ ಸನದಿ ಅಭಿಮತ.
ಸರ್ವಾಧ್ಯಕ್ಷರ ಆಯ್ಕೆ ವಿಚಾರವಾಗಿ, ಸಿದ್ದಲಿಂಗ ಪಟ್ಟಣಶೆಟ್ಟಿ, ಮಾಲತಿ ಪಟ್ಟಣಶೆಟ್ಟಿ, ರಹಮತ್ ತರೀಕೆರೆ, ಕುಂ.ವೀರಭದ್ರಪ್ಪ ಮತ್ತಿತರರ ಹೆಸರುಗಳು ಕೇಳಿಬರುತ್ತಿವೆ.