ಬೆಂಗಳೂರು: ಬರುವ ಡಿಸೆಂಬರ್‌ನಲ್ಲಿ ನಡೆಯಬೇಕಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಕಾಂಗ್ರೆಸ್ ಅಧಿವೇಶನ ಹಾಗೂ ಚಳಿಗಾಲದ ಅಧಿವೇಶನಗಳ ದಿನಾಂಕಗಳು ಪರಸ್ಪರ ಒಂದಕ್ಕೊಂದು ಅಡ್ಡಿಯಾಗುವ ಸಾಧ್ಯತೆ ಇದ್ದು, ಚಳಿಗಾಲದ ಅಧಿವೇಶನದ ದಿನಾಂಕ ನಿಗದಿ ಈಗ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ರಾಜ್ಯದಲ್ಲಿ ಪ್ರಸ್ತುತ ಅಕ್ಟೋಬರ್-ನವೆಂಬರ್ ತಿಂಗಳಿಡೀ ಉಪಚುನಾವಣೆಯ ಕಾವು ಏರಲಿದ್ದು, ಡಿಸೆಂಬರ್ 20 ರಿಂದ 22 ರವರೆಗೆ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಡಿ.26 ಮತ್ತು 27 ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯುವುದಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಈ ಬಗ್ಗೆ ಸಮಾಲೋಚನೆ ನಡೆಸಿದ್ದು, ಎಲ್ಲವನ್ನೂ ಪರಿಗಣಿಸಿ ಚಳಿಗಾಲದ ಅಧಿವೇಶನ ನಿಗದಿಪಡಿಸುವಂತೆ ಕೋರಿದ್ದಾರೆ.
ಮಂಡ್ಯ ಸಾಹಿತ್ಯ ಸಮ್ಮೇಳನದ ತಯಾರಿ ಹಾಗೂ ಸಮ್ಮೇಳನದ ಸಂದರ್ಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳೆಲ್ಲರೂ ಇರಲೇಬೇಕಾಗುತ್ತದೆ. ಅದೇ ಸಂದರ್ಭದಲ್ಲಿ ಅಧಿವೇಶನವೂ ಇದ್ದರೆ ಕಷ್ಟವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಅ.18ಕ್ಕೆ ಸ್ಪೀಕರ್, ಸಭಾಪತಿ ಬೆಳಗಾವಿ ಭೇಟಿ :
ಚಳಿಗಾಲದ ಅಧಿವೇಶನ ನೆಪದಲ್ಲಿ ಬೆಳಗಾವಿಗೆ ಆಗಮಿಸುವ ಜನಪ್ರತಿನಿಧಿಗಳು ಡಿ.26 ಮತ್ತು 27ರ ಕಾಂಗ್ರೆಸ್ ಅಧಿವೇಶನದಲ್ಲೂ ಪಾಲ್ಗೊಳ್ಳಲು ಅನುಕೂಲ ಆಗುತ್ತದೆ ಎನ್ನುವ ಲೆಕ್ಕಾಚಾರವಿದೆ.
ಒಂದು ವೇಳೆ ಡಿ.2 ಅಥವಾ ಡಿ.9 ರ ಸೋಮವಾರದಿಂದ ಚಳಿಗಾಲದ ಅಧಿವೇಶನ ನಡೆಸಿದರೆ, ಮತ್ತೆ ಡಿ.26 ಹಾಗೂ 27ರ ಕಾಂಗ್ರೆಸ್ ಅಧಿವೇಶನಕ್ಕಾಗಿ ಬೆಳಗಾವಿವರೆಗೆ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದ ಜನಪ್ರತಿನಿಧಿಗಳು ಬಿಟ್ಟರೆ ಉಳಿದವರು ಬರದಿರಬಹುದು ಎಂಬ ಅಂದಾಜೂ ಇದೆ. ಡಿ.16 ರಿಂದ 27ರವರೆಗೆ ಚಳಿಗಾಲದ ಅಧಿವೇಶನ ನಡೆಸುವ ಚಿಂತನೆಗಳೂ ನಡೆದಿವೆ.
ಈ ಎಲ್ಲ ಹಿನ್ನೆಲೆಯಲ್ಲಿ ಅ.18ರಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರು ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದು, ಚಳಿಗಾಲ ಅಧಿವೇಶನದ ತಯಾರಿ ಬಗ್ಗೆ ಸಭೆ ನಡೆಸಿ ಮಾರ್ಗದರ್ಶನ ಮಾಡಲಿದ್ದಾರೆ.
Laxmi News 24×7