ಮುಂಬೈ: ಮುಂಬೈ ಪ್ರವೇಶಿಸುವ ಮತ್ತು ನಿರ್ಗಮಿಸುವ ಎಲ್ಲ ಐದು ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಅನ್ನು ‘ಮಹಾಯುತಿ’ ಸರ್ಕಾರ ರದ್ದುಗೊಳಿಸಿದೆ.
ಮಹಾರಾಷ್ಟ್ರ ವಿಧಾನಸಭೆಗೆ ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಸರ್ಕಾರದ ಈ ನಿರ್ಧಾರ ಮಹತ್ವ ಪಡೆದಿದೆ.
ಮುಂಬೈಗೆ ಪ್ರವೇಶಿಸುವುದಕ್ಕಾಗಲೀ ಅಥವಾ ಮುಂಬೈನಿಂದ ನಿರ್ಗಮಿಸುವುದಕ್ಕಾಗಲೀ ಲಘು ಮೋಟಾರ್ ವಾಹನಗಳಿಗೆ ಇದುವರೆಗೆ ವಿಧಿಸುತ್ತಿದ್ದ ₹45 ಟೋಲ್ ಶುಲ್ಕವನ್ನು ರದ್ದುಗೊಳಿಸಲು ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಸಚಿವ ಸಂಪುಟ ಸೋಮವಾರ ನಿರ್ಧರಿಸಿದೆ.
ಕಾರು, ಜೀಪ್, ಮಿನಿ ಗೂಡ್ಸ್ ವಾಹನ ಸೇರಿ ಲಘು ವಾಹನಗಳಿಗೆ(ಎಲ್‌ಎಂವಿ) ಟೋಲ್ ಶುಲ್ಕ ವಿನಾಯಿತಿ ಕಲ್ಪಿಸಲಾಗಿದೆ.
‘ಮಹಾ’ ಸರ್ಕಾರದ ಈ ನಿರ್ಧಾರದಿಂದಾಗಿ ದಹಿಸರ್, ಆನಂದ್ ನಗರ್, ವೈಶಾಲಿ, ಐರೋಲಿ ಹಾಗೂ ಮುಲುಂದ್ ಟೋಲ್ ಕೇಂದ್ರಗಳಲ್ಲಿ ಇನ್ನುಮುಂದೆ ಎಲ್‌ಎಂವಿ ವಾಹನಗಳ ಮಾಲೀಕರು ಟೋಲ್ ಹಣ ಪಾವತಿಸಬೇಕಿಲ್ಲ. ಈ ಆದೇಶವು ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
Laxmi News 24×7