ನವದೆಹಲಿ: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಹೈಕಮಿಷನರ್ ಅವರನ್ನೂ ತನಿಖೆಗೆ ಒಳಪಡಿಸುವ ಕೆನಡಾ ಸರ್ಕಾರದ ಪ್ರಯತ್ನವನ್ನು ಭಾರತ ಬಲವಾಗಿ ವಿರೋಧಿಸಿದೆ.
ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರ ವಿರುದ್ಧ ಮಾಡಿರುವ ಆರೋಪಗಳನ್ನು ಭಾರತವು ‘ಅಸಂಬದ್ಧ’ ಎಂದು ತಿರಸ್ಕರಿಸಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮದ ಎಚ್ಚರಿಕೆ ನೀಡಿದೆ.
‘ಈ ಅರೋಪವು ಜಸ್ಟಿನ್ ಟ್ರುಡೊ ಸರ್ಕಾರದ ರಾಜಕೀಯ ಕಾರ್ಯಸೂಚಿಯ ಒಂದು ಭಾಗ’ ಎಂದು ತಿರುಗೇಟು ನೀಡಿದೆ.
‘ಭಾರತವು ಕೆನಡಾದಿಂದ ಭಾನುವಾರ ರಾಜತಾಂತ್ರಿಕ ಪತ್ರವೊಂದನ್ನು ಸ್ವೀಕರಿಸಿದ್ದು, ಆ ದೇಶದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಭಾರತದ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಬೇಕಾಗಬಹುದು ಎಂದು ಅದರಲ್ಲಿ ತಿಳಿಸಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಭಾರತದ ರಾಜತಾಂತ್ರಿಕರ ವಿರುದ್ಧ ಆರೋಪಗಳನ್ನು ಹೊರಿಸಲು ಕೆನಡಾ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಪ್ರತಿಕ್ರಿಯೆಯಾಗಿ ಮುಂದಿನ ಕ್ರಮವನ್ನು ತೆಗೆದುಕೊಳ್ಳುವ ಹಕ್ಕನ್ನು ಭಾರತವು ಕಾಯ್ದಿರಿಸಿದೆ ಎಂದು ಸ್ಪಷ್ಟಪಡಿಸಿದೆ.
Laxmi News 24×7