ಬೆಂಗಳೂರು: ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನದ ಅರ್ಚಕ ಹಾಗೂ ನೌಕರರಿಗೆ 5 ಲಕ್ಷ ರೂ. ಮೌಲ್ಯದ ಜೀವ ವಿಮೆ ನೀಡಬೇಕು ಎನ್ನುವ ಆಶಯವಿದೆ ಎಂದು ಮುಜರಾಯಿ ಮತ್ತು ಸಾರಿಗೆ ಇಲಾಖೆಯ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟರು.
ಚಾಮರಾಜಪೇಟೆಯ ಶ್ರೀ ರಾಮೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಹಿಂದೂ ಧಾರ್ಮಿಕ ಇಲಾಖೆಯ ನೌಕರರ, ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮೃತ ಅರ್ಚಕರ ಕುಟುಂಬಕ್ಕೆ ಮರಣ ಉಪಾದಾನ ವಿರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೌಕರರ, ಅರ್ಚಕರ ಅಭಿವೃದ್ಧಿಗಾಗಿ ಶ್ರಮಿಸು ವುದೇ ನಮ್ಮ ಮೊದಲ ಗುರಿ. ಈ ಹಿನ್ನೆಲೆಯಲ್ಲಿ ಜೀವವಿಮೆ ಯೋಜನೆ ಜಾರಿಗೆ ತರಬೇಕು ಎನ್ನುವುದು ನಮ್ಮ ಆಶಯ. ಇದರಿಂದಾಗಿ ಅರ್ಚಕ ಸಮುದಾಯಕ್ಕೆ ದೊಡ್ಡ ಆರ್ಥಿಕ ಭದ್ರತೆ ಸಿಕ್ಕಂತಾಗುತ್ತದೆ. ಈ ಬಗ್ಗೆ ಸರ್ಕಾರದ ವಲಯದಲ್ಲಿ ಚರ್ಚೆಗಳಾಗಿದ್ದು, ರಾಜ್ಯಪಾಲರ ಒಪ್ಪಿಗೆಯನ್ನು ಎದುರು ನೋಡುತ್ತಿದ್ದೇವೆ ಎಂದರು.