ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಈ ಬಾರಿ ಸಂಭ್ರಮದಿಂದ ನಡೆದ ದಸರಾ ಉತ್ಸವ ಶನಿವಾರ ಸಂಪನ್ನಗೊಂಡಿತು.
ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಳೆದ ವರ್ಷ ದಸರೆ ಕಳೆಗುಂದಿತ್ತು. ಈ ವರ್ಷ ಉತ್ತಮ ಮಳೆ-ಬೆಳೆ ಹಿನ್ನೆಲೆಯಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿತ್ತು.
ಶುಕ್ರವಾರ ಆಯುಧ ಪೂಜೆ ಮತ್ತು ಶನಿವಾರ ವಿಜಯದಶಮಿ ಕಾರ್ಯಕ್ರಮ ನೆರವೇರಿದವು.
ಹಬ್ಬದ ಪ್ರಯುಕ್ತ ನಗರದ ವಿವಿಧ ದೇವಸ್ಥಾನಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಮಕ್ಕಳು, ಯುವಜನರು, ಮಹಿಳೆಯರು ಸೇರಿ ಎಲ್ಲ ಭಕ್ತರು ಬೆಳಿಗ್ಗೆಯಿಂದಲೇ ದೇಗುಲಗಳತ್ತ ಹೆಜ್ಜೆಹಾಕಿ, ವಿಶೇಷ ಪೂಜೆ ಸಲ್ಲಿಸಿದರು. ಸಕಲ ಜೀವರಾಶಿ ಒಳಿತಿಗೆ ಪ್ರಾರ್ಥಿಸಿದರು. ತಮ್ಮ ಇಷ್ಟಾರ್ಥ ಈಡೇರಿದ್ದರಿಂದ ಕೆಲವರು ದೇವರಿಗೆ ಕಾಣಿಕೆ ಅರ್ಪಿಸಿ ಹರಕೆ ತೀರಿಸಿದರು.
ವಾಣಿಜ್ಯ ಮಳಿಗೆಗಳು, ಕಚೇರಿಗಳು ಮತ್ತು ಮನೆಗಳಲ್ಲೂ ಧಾರ್ಮಿಕ ಆಚರಣೆ ನೆರವೇರಿದವು. ತಾವು ಬಳಸುವ ಆಯುಧಗಳಿಗೆ ಜನರು ಪೂಜೆ ಸಲ್ಲಿಸಿದರು. ಕೆಲವರು ಬೈಕ್‌ಗಳು, ಟ್ರ್ಯಾಕ್ಟರ್‌ಗಳು ಮತ್ತಿತರ ವಾಹನಗಳನ್ನು ಖರೀದಿಸಿ ಸಂಭ್ರಮಿಸಿದರು.