ದಾವಣಗೆರೆ: ಕಳೆದ ಮೂರು ತಿಂಗಳನಿಂದ ಗೌರವ ಧನ ಬಿಡುಗಡೆಯಾಗದೆ ಜೀವನ ನಿರ್ವಹಣೆಗೆ ತೊಂದರೆಯಿಂದ ಬೇಸತ್ತ ಅಂಗನವಾಡಿ ಸಹಾಯಕಿಯೊಬ್ಬರು ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಡಾಂಗೇ ಪಾರ್ಕಿನ ಅಂಗನವಾಡಿ ಕೇಂದ್ರದ ಸಹಾಯಕಿ ಭಾರತಿ ಆತ್ಮಹತ್ಯೆಗೆ ಯತ್ನಿಸಿದವರು.
ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ, ಇತರೆಡೆ ಕರೆದೊಯ್ಯಲು ಹಣಕಾಸಿನ ತೊಂದರೆಯಿಂದ ಕುಟುಂಬದವರು ಪರಿತಪಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಕಳೆದ ಮೂರು ತಿಂಗಳನಿಂದ ಗೌರವ ಧನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಭಾರತಿ ಅವರು ಕುಟುಂಬ ನಿರ್ವಹಣೆಗೆ ಕೆಲವು ಕಡೆ ಸಾಲ ಮಾಡಿದ್ದರು. ಗೌರವ ಧನ ಬಂದಲ್ಲಿ ಸಾಲ ತೀರುವಳಿ ಮಾಡುವ ಯೋಜನೆ ಇತ್ತು. ಆದರೆ, ಗೌರವ ಧನ ಬಿಡುಗಡೆ ಆಗಿರಲಿಲ್ಲ. ಒಂದು ಕಡೆ ಜೀವನ ನಿರ್ವಹಣೆಯ ಸಮಸ್ಯೆ ಮತ್ತೊಂದು ಕಡೆ ಸಾಲ ತೀರುವಳಿಗೆ ಒತ್ತಡದಿಂದ ಮನನೊಂದು ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.