ಅನಾಥ ರಸ್ತೆಗಳ ದುರಸ್ತಿಗೆ ಆಗ್ರಹ
ಹುಬ್ಬಳ್ಳಿ, ಅಕ್ಟೋಬರ್ 09: ರಸ್ತೆ ಗುಂಡಿ ಸಮಸ್ಯೆ, ಸವಾರರು ಪ್ರಯಾಣಿಕರ ಪರದಾಟ ಕೇವಲ ರಾಜ್ಯ ರಾಜಧಾನಿಗೆ ಮಾತ್ರವೇ ಸೀಮೀತವಾಗಿಲ್ಲ. ಬದಲಾಗಿ ಇದು ಛೋಟಾ ಮುಂಬೈ ಅಂತಲೇ ಕರೆಸಿಕೊಳ್ಳುವ ರಾಜ್ಯ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಕಾಡುತ್ತಿದೆ. ಇಲ್ಲಿನ ರಸ್ತೆಗಳು ಹಾಳಾಗಿದ್ದು, ದುರಸ್ತಿ ಮಾಡದ ಸರ್ಕಾರದ ವಿರುದ್ಧ ಆಟೋ ಚಾಲಕರ ಸಂಘವು ಅನಾಥ ರಸ್ತೆ ನಾಮಕರಣ ಮಾಡಿ ವಿನೂತನವಾಗಿ ಪ್ರತಿಭಟನೆ ಮಾಡಿದೆ.
ಹುಬ್ಬಳ್ಳಿ ನಗರದ ಬಹುತೇಕ ರಸ್ತೆಗಳು ದುರಸ್ತಿ ಎದುರು ನೋಡುತ್ತಿವೆ. ನಗರದಲ್ಲಿ ಪ್ರಮುಖ ರಸ್ತೆಗಳೇ ಹಾಳಾಗಿವೆ. ಸಾರ್ವಜನಿಕರು, ವಾಹನ ಸವಾರರು ಹಾಗೂ ಮಹಿಳೆಯರು ವಯೋವೃದ್ಧರು ರಸ್ತೆಗೆ ಇಳಿಯಲು ಭಯಪಡಬೇಕಾದ ಸ್ಥಿತಿ ಇದೆ. ಮನೆಯಿಂದ ವಾಹನಗಳ ಮೇಲೆ ಬರಲು ಸಾವಿರ ಬಾರಿ ಯೋಚಿಸಬೇಕಾದ ಸ್ಥಿತಿ ಇಲ್ಲಿದೆ.
ಅನಾಥ ರಸ್ತೆಗಳು: ಸರ್ಕಾರದ ವಿರುದ್ದ ಘೋಷಣೆ
ಈ ಸಂಬಂಧ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘ ಹಾಗೂ ಹುಬ್ಬಳ್ಳಿ ಆಟೋ ಚಾಲಕರ ಸಂಘದ ವತಿಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಹಳೆ ಬಸ್ ನಿಲ್ದಾಣ ಬಳಿ ತಗ್ಗು ಗುಂಡಿಯ ರಸ್ತೆಯಲ್ಲಿ ಅನಾಥ ರಸ್ತೆ ಅಂತಾ ನಾಮಕರಣ ಮಾಡಿ ವಿನೂತನ ಪ್ರತಿಭಟನೆ ಮಾಡಲಾಯಿತು. ಸಂಘದ ಸದಸ್ಯರು ಸೇರಿದಂತೆ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.