ಮೈಸೂರು: ದಸರಾ ಗಜಪಡೆಯ ಎಲ್ಲ 14 ಆನೆಗಳಿಗೆ ಸೋಮವಾರ 2ನೇ ಹಂತದ ತೂಕ ಪರೀಕ್ಷೆ ನಡೆಯಿತು. ಕ್ಯಾಪ್ಟನ್ ಅಭಿಮನ್ಯು ಅತಿ ಹೆಚ್ಚು ತೂಕ ತೂಗಿದರೆ, ಭೀಮ ಕಳೆದ ಬಾರಿಗಿಂತ ಬರೋಬ್ಬರಿ 435 ಕೆ.ಜಿ. ತೂಕ ಹೆಚ್ಚಿಸಿಕೊಳ್ಳುವ ಮೂಲಕ 2ನೇ ಸ್ಥಾನದಲ್ಲಿದ್ದಾನೆ.
ಎಂದಿನಂತೆ ತೂಕ ಪರೀಕ್ಷೆಯಲ್ಲಿ ಕ್ಯಾಪ್ಟನ್ ಅಭಿಮನ್ಯುವೇ ಹೆಚ್ಚು ಬಲಶಾಲಿಯಾಗಿದ್ದಾನೆ.
ಆ. 21ರ ತೂಕ ಪರೀಕ್ಷೆಯಲ್ಲಿ 5,560 ಕೆ.ಜಿ., ಎರಡನೇ ಪರೀಕ್ಷೆಯಲ್ಲಿ 5,820 ಕೆ.ಜಿ. ತೂಕ ತೂಗಿದ್ದು 260 ಕೆ.ಜಿ. ಹೆಚ್ಚಿಸಿಕೊಂಡಿದ್ದಾನೆ. ಇನ್ನು ಕಿರಿಯ ಆನೆಗಳಲ್ಲಿ ಒಂದಾದ ಮತ್ತಿ ಗೋಡು ಶಿಬಿರದ ಭೀಮ ಒಂದೂವರೆ ತಿಂಗಳಲ್ಲಿ ಬರೋಬ್ಬರಿ 435 ಕೆ.ಜಿ. ತೂಕ ಹೆಚ್ಚಿಸಿ ಕೊಂಡಿದ್ದಾನೆ. ಮೊದಲ ತೂಕ ಪರೀಕ್ಷೆಯಲ್ಲಿ 4,945 ಕೆ.ಜಿ. ಇದ್ದ ಭೀಮ, ಎರಡನೇ ಪರೀಕ್ಷೆಯಲ್ಲಿ 5,380 ಕೆ.ಜಿ. ತೂಗಿದ್ದಾನೆ.
ಉಳಿದಂತೆ ಮೊದಲ ಬಾರಿ ದಸರಾದಲ್ಲಿ ಭಾಗವಹಿಸುತ್ತಿರುವ ಏಕಲವ್ಯನ ತೂಕ 4,730ರಿಂದ 5,095 ಕೆ.ಜಿ.ಗೆ ಏರಿದೆ. ಪ್ರಶಾಂತ್ 4,875ರಿಂದ 5,240ಕ್ಕೆ, ಸುಗ್ರೀವ 5,190ರಿಂದ 5,545ಕ್ಕೆ, ಲಕ್ಷ್ಮೀ 2,625ರಿಂದ 2480 ಕೆ.ಜಿ.ಗೆ ಹೆಚ್ಚಳವಾಗಿದೆ. ಗಜಪಡೆಯ ಹಿರಿಯ ಸದಸ್ಯೆ ವರಲಕ್ಷ್ಮೀ ಒಂದೂವರೆ ತಿಂಗಳಲ್ಲಿ ಕೇವಲ 60 ಕೆ.ಜಿ. ಮಾತ್ರ ಹೆಚ್ಚಾಗಿದೆ.
ಟಾಪ್ 5 ಆನೆಗಳ ತೂಕ (ಕೆ.ಜಿ.ಯಲ್ಲಿ)
ಆನೆ ಅ. 07ರಂದು ಆ. 24ರಂದು ಹೆಚ್ಚಿದ ತೂಕ
ಅಭಿಮನ್ಯು 5,820 5,560 260
ಸುಗ್ರೀವ 5,545 5,190 355
ಭೀಮ 5,380 4,945 435
ಗೋಪಿ 5,280 4,970 310
ಧನಂಜಯ 5,255 5,155 100
40.84 ಲೀ ಹಾಲು ಹಿಂಡಿದ ಹಸು!
ಮೈಸೂರು: ದಸರಾ ಉತ್ಸವ ಅಂಗವಾಗಿ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ನಗರದ ಜೆ.ಕೆ. ಮೈದಾನದಲ್ಲಿ ಆಯೋಜಸಿದ್ದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಆನೇಕಲ್ ತಾಲೂಕಿನ ಕಗ್ಗಲಿಪುರದ ರಾಮಚಂದ್ರರೆಡ್ಡಿ ಅವರ ಹಸು ಬರೋಬ್ಬರಿ 40.84 ಲೀಟರ್ ಹಾಲು ಹಿಂಡಿ ಪ್ರಥಮ ಸ್ಥಾನ ಪಡೆದುಕೊಂಡಿತು. ವಿವಿಧ ಭಾಗಗಳಿಂದ 8 ಹಸುಗಳು ಭಾಗವಹಿಸಿದ್ದು, ಬೆಳಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ಹಿಂಡಿದ ಒಟ್ಟು ಹಾಲಿನ ಪ್ರಮಾಣದಲ್ಲಿ ಹೆಚ್ಚು ಹಾಲು ನೀಡಿದ ಹಸುವಿಗೆ ಬಹುಮಾನ ನೀಡಲಾಯಿತು.