ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!;
ಬೀದರ: ತೊಗರಿ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಜಿಲ್ಲಾ ಪೊಲೀಸರು ಪತ್ತೆ ಹಚ್ಚಿ, ಕಿತ್ತು ಹಾಕಿರುವ ಘಟನೆ ರವಿವಾರ(ಅ6) ಕರ್ನಾಟಕ – ಮಹಾರಾಷ್ಟ್ರ ಗಡಿ ಗ್ರಾಮ ಉಜಳಂಬದಲ್ಲಿ ನಡೆದಿದೆ.
ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಹುಮನಾಬಾದ್ ಡಿವೈಎಸ್ಪಿ ಮತ್ತು ಸಿಪಿಐ ನೇತೃತ್ವದ ತಂಡ ದಾಳಿ ನಡೆಸಿದೆ.
3.7 ಎಕರೆ ಜಮೀನಿನಲ್ಲಿ ತೊಗರಿ ಬೆಳೆಯಲಾಗಿದ್ದು, ಮಧ್ಯದಲ್ಲಿ ಗಾಂಜಾ ಗಿಡಗಳನ್ನು ನೆಡಲಾಗಿದ್ದು, 6 ಅಡಿಯಷ್ಟು ಎತ್ತರ ಬೆಳೆದಿದ್ದವು. ಸರ್ಕಾರಿ ಪಂಚನಾಮ ನಡೆಸಿ, ಈವರೆಗೆ 700 ಕ್ಕಿಂತ ಅಧಿಕ ಗಿಡಗಳನ್ನು ಕಿತ್ತು ಹಾಕಲಾಗಿದೆ. ಇನ್ನೂ ಕಾರ್ಯಚರಣೆಯನ್ನು ಮುಂದುವರೆಸಲಾಗಿದ್ದು, 2 ಕ್ವಿಂಟಾಲ್ ಗಾಂಜಾ ಬೆಳೆ ಇರುವ ಅಂದಾಜು ಇದೆ.
ಬಸವಂತ ಎಂಬುವರಿಗೆ ಈ ಜಮೀನು ಸೇರಿದೆ. ಸದರಿ ಹೊಲ ಕರ್ನಾಟಕದ ಸರ್ವೇ ನಂಬರ್ ಸೇರಿದ್ದರೆ, ಮಾಲಕರು ಮಹಾರಾಷ್ಟ್ರದವರು ಆಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್.ಪಿ ಪ್ರದೀಪ ಗುಂಟಿ ಭೇಟಿ ನೀಡಿದ್ದಾರೆ.