ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ವತಿಯಿಂದ ವ್ಯಾಜ್ಯಮುಕ್ತ ಗ್ರಾಮಕ್ಕಾಗಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅದರ ಭಾಗವಾಗಿ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ 4 ಗ್ರಾಮಗಳನ್ನು ದತ್ತು ಪಡೆದುಕೊಂಡು ಕಾನೂನು ನೆರವನ್ನು ನೀಡಲಾಗುತ್ತಿದೆ ಎಂದು ಎಚ್.ಸಿ.ಇ.ಎಸ್ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷ ಎಸ್.ಕೆ.
ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ಗ್ರಾಮಗಳಲ್ಲಿ, ಹೈಕೋರ್ಟ್, ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ 35 ಲಕ್ಷ ಪ್ರಕರಣಗಳು ಚಾಲ್ತಿಯಲ್ಲಿವೆ. ರಾಜಿ ಸಂಧಾನದ ಮೂಲಕ ಹೆಚ್ಚು ಹೆಚ್ಚು ಪ್ರಕರಣಗಳು ಇತ್ಯರ್ಥವಾದರೆ ಸಮಾಜದಲ್ಲಿ ಸೌಹಾರ್ದತೆ ಸ್ಥಾಪನೆಯಾಗಿ, ಉತ್ತಮ ಜೀವನ ಮುಂದುವರಿಸಲು ಅನುಕೂಲಕರವಾಗಿರುತ್ತದೆ ಎಂದರು.
ಈಗಾಗಲೇ ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಪ್ರಾಧಿಕಾರಗಳು ಲೋಕ ಅದಾಲತ್ ಮೂಲಕ ರಾಜೀ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಎಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯ ನ್ಯಾಯಾಲಯಗಳ ಮೂಲಕವೇ ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.