ಕುಂದಾಪುರ: ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿ ಹಾಗೂ ಹೈದರಾಬಾದ್‌ಗೆ ಕಾರವಾರದಿಂದ ಕುಂದಾಪುರ -ಉಡುಪಿ- ಮಂಗಳೂರು ಮೂಲಕ ರೈಲು ಸಂಪರ್ಕ ಆರಂಭಿಸಬೇಕು ಎನ್ನುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣಗೆ ಮನವಿ ಸಲ್ಲಿಸಿದ್ದಾರೆ.
ಕಳೆದೊಂದು ದಶಕದಿಂದ ತಿರುಪತಿಗೆ ರೈಲು ಸಂಪರ್ಕ ಬೇಕೆನ್ನುವ ಬೇಡಿಕೆಯನ್ನು ಕರಾವಳಿಯ ಎಲ್ಲ ಊರುಗಳ ಜನರು ಇಡುತ್ತಿದ್ದು, ಈ ಬಗ್ಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಸಂಸದರ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ, ಸಂಸದರು, ಕೊಂಕಣ ರೈಲ್ವೇ ಆಡಳಿತ ನಿರ್ದೇಶಕರು ಹಾಗೂ ನೈಋತ್ಯ ರೈಲ್ವೇ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ರೈಲ್ವೇ ಸಚಿವರಿಗೆ ಮನವಿ ಸಲ್ಲಿಸಿದರು. ಸಂಸದರ ಮನವಿಗೆ ಸೂಕ್ತವಾಗಿ ಸ್ಪಂದಿಸಿರುವ ರೈಲ್ವೇ ಸಚಿವಾಲಯ, ಕರಾವಳಿ ಕರ್ನಾಟಕವನ್ನು ತಿರುಪತಿ ಹೈದರಾಬಾದ್ ಜತೆ ಜೋಡಿಸಲು ರೈಲು ಸೇವೆ ಆರಂಭಿಸುವುದಾಗಿ ತಿಳಿಸಿದೆ.