Breaking News

“ಸ್ಥಳೀಯ’ ಚುನಾವಣೆ ನಡೆಸದಿದ್ದರೆ ಅನುದಾನಕ್ಕೆ ಕತ್ತರಿ?

Spread the love

ಬೆಂಗಳೂರು: ಕಾಲಮಿತಿಯೊಳಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯದಿದ್ದರೆ ಅವುಗಳಿಗೆ ಬರಬೇಕಾದ ಅನುದಾನವನ್ನು ತಡೆ ಹಿಡಿಯುವ ಬದಲು ರಾಜ್ಯ ಸರಕಾರಕ್ಕೆ ಬರಬೇಕಾದ ಅನುದಾನವನ್ನು ತಡೆ ಹಿಡಿಯಿರಿ…’

ಇದು ಕೇಂದ್ರ ಸರಕಾರದ 16ನೇ ಹಣಕಾಸು ಆಯೋಗದ ಮುಂದೆ ರಾಜ್ಯ 5ನೇ ಹಣಕಾಸು ಆಯೋಗ ಇಟ್ಟಿರುವ ಷರತ್ತು.

ಪ್ರತಿ 5 ವರ್ಷಗಳ ಅವಧಿಗೆ ಕಾಲ-ಕಾಲಕ್ಕೆ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕು. ಪ್ರತಿ 5 ವರ್ಷಕ್ಕೊಮ್ಮೆ ರಾಜ್ಯ ಹಣಕಾಸು ಆಯೋಗ ರಚನೆ ಆಗಬೇಕು. ಇಲ್ಲದಿದ್ದರೆ ನಗರ ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರಪಾಲಿಕೆಗಳಿಗೆ ಮತ್ತು ಗ್ರಾ.ಪಂ, ತಾ.ಪಂ ಹಾಗೂ ಜಿ.ಪಂ.ಗಳಿಗೆ ಬರಬೇಕಾದ ಅನುದಾನ ತಡೆ ಹಿಡಿಯಲಾಗುತ್ತದೆ. ಕೇಂದ್ರ ಹಣಕಾಸು ಆಯೋಗವು ಇಂಥದ್ದೊಂದು ಷರತ್ತನ್ನು ಹಾಕಿರುತ್ತದೆ.

ಆದರೆ, ಕಾಲ ಕಾಲಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸುವುದು ರಾಜ್ಯ ಚುನಾವಣ ಆಯೋಗದ ಕೆಲಸ, ಅದಕ್ಕೆ ಅವಕಾಶ ಮಾಡಿಕೊಡಬೇಕಾದ ಜವಾಬ್ದಾರಿ ರಾಜ್ಯ ಸರಕಾರದ್ದಾಗಿರುತ್ತದೆ. ಅದೇ ರೀತಿ ಪ್ರತಿ 5 ವರ್ಷಕ್ಕೊಮ್ಮೆ ರಾಜ್ಯ ಹಣಕಾಸು ಆಯೋಗ ರಚನೆ ಮಾಡುವ ಹೊಣೆ ರಾಜ್ಯ ಸರಕಾರದ್ದು. ಹೀಗಿದ್ದಾಗ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯದಿದ್ದರೆ, ರಾಜ್ಯ ಹಣಕಾಸು ಆಯೋಗ ರಚನೆ ಆಗದಿದ್ದರೆ ಅದು ಸ್ಥಳೀಯ ಸಂಸ್ಥೆಗಳ ತಪ್ಪಲ್ಲ, ರಾಜ್ಯ ಸರಕಾರ ಅದಕ್ಕೆ ಹೊಣೆ. ರಾಜ್ಯ ಸರಕಾರದ ತಪ್ಪಿಗೆ ಸ್ಥಳೀಯ ಸಂಸ್ಥೆಗಳ ಅನುದಾನ ತಡೆ ಹಿಡಿಯುವುದು ಯಾವ ನ್ಯಾಯ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಕೊಡುವುದು ಎಷ್ಟು ಸರಿ. ಅದಕ್ಕಾಗಿ ರಾಜ್ಯ ಸರಕಾರಕ್ಕೆ ಬರಬೇಕಾದ ಅನುದಾನವನ್ನು ತಡೆ ಹಿಡಿಯಿರಿ ಎಂದು ರಾಜ್ಯ ಹಣಕಾಸು ಆಯೋಗವು ಕೇಂದ್ರ ಹಣಕಾಸು ಆಯೋಗದ ಮುಂದೆ ವಾದಿಸಿದೆ.

ಏಕೆ ಹೀಗೆ ಮಾಡಬೇಕು?
ಕಳೆದ 3 ವರ್ಷಗಳಿಂದ ರಾಜ್ಯದಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆದಿಲ್ಲ, ಬಿಬಿಎಂಪಿಗೂ ಚುನಾವಣೆ ಆಗಿಲ್ಲ. ಈ ಕಾರಣಕ್ಕಾಗಿ 15ನೇ ಹಣಕಾಸು ಆಯೋಗದಲ್ಲಿ ಬರಬೇಕಿದ್ದ 2,100 ಕೋಟಿ ರೂ. ಅನುದಾನ ತಡೆ ಹಿಡಿಯಲಾಗಿದೆ. ಆದರೆ, ರಾಜ್ಯ ಸರಕಾರಕ್ಕೆ ಬರಬೇಕಾದ ಅನುದಾನ ತಡೆ ಹಿಡಿದಿಲ್ಲ. ಚುನಾವಣೆ ನಡೆಸಲು ಅವಕಾಶ ಮಾಡಿಕೊಡಬೇಕಾದ ರಾಜ್ಯ ಸರಕಾರದ ಅನುದಾನ ತಡೆ ಹಿಡಿದರೆ, ಆಗ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಕಾಲ-ಕಾಲಕ್ಕೆ ಚುನಾವಣೆಗಳನ್ನೂ ನಡೆಸುತ್ತದೆ, ರಾಜ್ಯ ಚುನಾವಣಾ ಆಯೋಗವನ್ನೂ ರಚಿಸುತ್ತದೆ. ಹಾಗಾಗಿ, ಯಾವುದೇ ರಾಜ್ಯದಲ್ಲಿ ಕಾಲಬದ್ಧವಾಗಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯದಿದ್ದರೆ ಅಥವಾ ರಾಜ್ಯ ಚುನಾವಣಾ ಆಯೋಗ ರಚನೆ ಆಗದಿದ್ದರೆ ಅಂತಹ ರಾಜ್ಯಗಳಿಗೆ ರಾಜ್ಯ ಸರಕಾರಕ್ಕೆ ಬರಬೇಕಾದ ಅನುದಾನವನ್ನು ತಡೆ ಹಿಡಿಯಲಾಗುವುದು ಎಂಬ ಷರತ್ತು ವಿಧಿಸಿ ಎಂದು 16ನೇ ಹಣಕಾಸು ಆಯೋಗದ ಮುಂದೆ ರಾಜ್ಯ ಹಣ ಕಾಸು ಆಯೋಗ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.

ಜಿ.ಪಂ. ತಾ.ಪಂ.ಗಳಿಗೆ ಚುನಾವಣೆ ನಡೆಯದ ಕಾರಣ, ಅವುಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬರಬೇಕಿದ್ದ 2,100 ಕೋಟಿ ರೂ. ಅನುದಾನ ತಡೆ ಹಿಡಿಯಲಾಗಿದೆ. ಆಯೋಗದ ಅವಧಿ ಅಂದರೆ 2024-25ನೇ ಸಾಲಿನವರೆಗೆ ಚುನಾವಣೆ ನಡೆಸಿದರೆ, ಅನುದಾನ ವಾಪಸ್‌ ಪಡೆದುಕೊಳ್ಳಬಹುದು. ಈ ಅವಧಿಯಲ್ಲಿ ಚುನಾವಣೆ ಸಾಧ್ಯವಾಗದಿದ್ದರೆ ಅನುದಾನ ಸಿಗುವುದಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಯದಿದ್ದಾಗ, ಅವುಗಳ ಅನುದಾನದ ಬದಲಿಗೆ ರಾಜ್ಯ ಸರಕಾರದ ಅನುದಾನ ತಡೆ ಹಿಡಿಯಬೇಕು ಎಂದು 16ನೇ ಹಣಕಾಸು ಆಯೋಗಕ್ಕೆ ಅಭಿಪ್ರಾಯ ಹೇಳಲಾಗಿದೆ.


Spread the love

About Laxminews 24x7

Check Also

ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಿದ ಸಚಿವ ಕೆ.ಜೆ. ಜಾರ್ಜ್

Spread the loveಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಮನೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ದಾರುಣ ಘಟನೆ ಜಿಲ್ಲೆಯಾದ್ಯಂತ ಶೋಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ